ಮಣಿಪುರ: ಎರಡು ಪಂಗಡಗಳ ನಡುವೆ ಗುಂಡಿನ ಚಕಮಕಿ ಇಂಫಾಲ: ಜನಾಂಗೀಯ ಕಲಹಕ್ಕೆ ಸಾಕ್ಷಿಯಾಗಿರುವ ಮಣಿಪುರದ ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಎರಡು ಪಂಗಡಗಳ ಸ್ವಯಂ ಸೇವಕರ ನಡುವೆ ಗುಂಡಿನ ಕಾಳಗ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಂಗ್‌ಪೋಕ್ಪಿ ಜಿಲ್ಲೆಯ ಪಕ್ಕದ ಬೆಟ್ಟಗಳಿಂದ ಇಂಫಾಲ್ ಕಣಿವೆಯ ವ್ಯಾಪ್ತಿಯಲ್ಲಿರುವ ಕೌತ್ರುಕ್ ಗ್ರಾಮದ ಮೇಲೆ ಶಸ್ತ್ರಸಜ್ಜಿತ ವ್ಯಕ್ತಿಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ದಾಳಿಯಿಂದ ಕೆಲವು ಮನೆಯ ಗೋಡೆಗಳು ಬಿರುಕುಬಿಟ್ಟಿವೆ. ಮಹಿಳೆಯರು, ಮಕ್ಕಳು ಹಾಗೂ ವೃದ್ಧರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಸ್ಥಳೀಯವಾಗಿ ತಯಾರಿಸಿದ ಶೆಲ್‌ಗಳನ್ನು ಗ್ರಾಮದ ಮೇಲೆ ಹಾರಿಸಲಾಗಿದ್ದು, ಜನ ಭಯಭೀತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕೌತ್ರುಕ್‌ ಗ್ರಾಮಸ್ಥರು ತಮ್ಮ ಮೇಲಿನ ದಾಳಿಗೆ ತಿರುಗೇಟು ನೀಡಿದ್ದು, ಗುಂಡಿನ ಚಕಮಕಿ ನಡೆದಿದೆ. ಸ್ಥಳಕ್ಕೆ ಭದ್ರತಾ ಸಿಬ್ಬಂದಿ ದೌಡಾಯಿಸಿದ್ದು ಪರಿಸ್ಥಿತಿ ಹತೋಟಿಗೆ ಬಂದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.