ಮಹದೇವ್ ಬೆಟ್ಟಿಂಗ್‌ ಆ್ಯಪ್‌ ಪ್ರಕರಣ: ನಟ ಸಾಹಿಲ್‌ ಖಾನ್‌ ಬಂಧನ ಮುಂಬೈ: ಮಹದೇವ್‌ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸಗಢದ ನಟ ಸಾಹಿಲ್ ಖಾನ್ ಅವರನ್ನು ಮುಂಬೈ ಸೈಬರ್ ಸೆಲ್‌ನ ವಿಶೇಷ ತನಿಖಾ ತಂಡವು ಬಂಧಿಸಿದೆ. ಬಂಧನ ಪೂರ್ವ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದ ನಂತರ ನಟನನ್ನು ಶನಿವಾರ ಛತ್ತೀಸಗಢದ ಜಗದಲ್‌ಪುರದಿಂದ ಬಂಧಿಸಲಾಯಿತು ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು. ‘ಸ್ಟೈಲ್’ ಮತ್ತು ‘ಎಕ್ಸ್‌ಕ್ಯೂಸ್ ಮಿ’ ಚಿತ್ರಗಳಿಂದ ಗುರುತಿಸಿಕೊಂಡಿದ್ದ ಸಾಹಿಲ್ ಖಾನ್ ಫಿಟ್‌ನೆಸ್ ಪರಿಣತ ಕೂಡ ಹೌದು. ಪ್ರಕರಣಕ್ಕೆ ಸಂಬಂಧಿಸಿ ಸಾಹಿಲ್‌ ಖಾನ್ ಅವರನ್ನು ಎಸ್‌ಐಟಿ ಇತ್ತೀಚೆಗೆ ವಿಚಾರಣೆ ನಡೆಸಿತ್ತು. ಸುಮಾರು ₹15 ಸಾವಿರ ಕೋಟಿ ಅವ್ಯವಹಾರಕ್ಕೆ ಸಂಬಂಧಿಸಿ ಎಫ್‌ಐಆರ್‌ ದಾಖಲಿಸಿದ್ದು, ಈವರೆಗೆ ಒಬ್ಬರನ್ನು ಬಂಧಿಸಿದಂತಾಗಿದೆ. ಸಾಹಿಲ್‌ ಖಾನ್‌ ಸೇರಿ ಇತರ 31 ಮಂದಿ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದರು. ರಾಜ್ಯದ ಕೆಲವು ಹಣಕಾಸು ಮತ್ತು ರಿಯಲ್ ಎಸ್ಟೇಟ್ ಸಂಸ್ಥೆಗಳು ಹಾಗೂ ವಿವಾದಿತ ಮಹಾದೇವ್ ಬೆಟ್ಟಿಂಗ್ ಆ್ಯಪ್‌ನ ಪ್ರವರ್ತಕರ ನಡುವಿನ ಅಕ್ರಮ ವಹಿವಾಟಿನ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಇವರ ಬ್ಯಾಂಕ್ ಖಾತೆಗಳು, ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಎಲ್ಲ ತಾಂತ್ರಿಕ ಸಾಧನಗಳ ಪರಿಶೀಲನೆಯನ್ನು ಈ ತನಿಖೆ ಒಳಗೊಂಡಿರಲಿದೆ ಎಂದು ಪೊಲೀಸರು ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.