ಎಎಪಿ ಮುಖಂಡ ಸಿಸೋಡಿಯಾ ಜಾಮೀನು ಅರ್ಜಿ ವಜಾ ನವದೆಹಲಿ: ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ, ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ದೆಹಲಿಯ ಕೋರ್ಟ್ ಮಂಗಳವಾರ ವಜಾ ಮಾಡಿತು. ಜಾಮೀನು ಮಂಜೂರು ಮಾಡಲು ಸಂದರ್ಭ ಸೂಕ್ತವಾಗಿಲ್ಲ ಎಂದು ಅರ್ಜಿ ವಜಾ ಮಾಡಿದ ಸಿಬಿಐ ಮತ್ತು ಇ.ಡಿ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ತಿಳಿಸಿದರು. ಅಬಕಾರಿ ನೀತಿ ಕುರಿತ ಹಣ ಅಕ್ರಮ ವರ್ಗಾವಣೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರನ್ನು ಬಂಧಿಸಲಾಗಿದೆ. ಸಿಬಿಐ, ಜಾರಿ ನಿರ್ದೇಶನಾಲಯ (ಇ.ಡಿ) ಪರ ವಕೀಲರು ಹಾಗೂ ಸಿಸೋಡಿಯಾ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶರು ಈ ಕುರಿತ ಆದೇಶವನ್ನು ಕಾಯ್ದಿರಿಸಿದರು. ಹಗರಣದಲ್ಲಿ ಸಿಸೋಡಿಯಾ ಪಾತ್ರವಿದೆ ಎಂಬ ಆರೋಪದಡಿ ಸಿಬಿಐ 2023ರ ಫೆಬ್ರುವರಿ 26ರಂದು ಬಂಧಿಸಿದ್ದೆ, ಹಣ ಅಕ್ರಮ ವರ್ಗಾವಣೆ ಪ್ರಕರಣದ ಸಂಬಂಧ ಇ.ಡಿ ಮಾರ್ಚ್ 9, 23ರಂದು ಬಂಧಿಸಿತ್ತು. ಬಂಧನದ ಹಿಂದೆಯೇ ಸಿಸೋಡಿಯಾ ಅವರು ದೆಹಲಿಯ ಸಚಿವ ಸಂಪುಟಕ್ಕೆ 2023ರ ಫೆಬ್ರುವರಿ 28ರಂದು ರಾಜೀನಾಮೆಯನ್ನು ಸಲ್ಲಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.