ಸಾಮಾಜಿಕ ಮಾಧ್ಯಮದಲ್ಲಿ ಗೆಳೆತನ: ಬಾಲಕಿಯನ್ನು ಅಪಹರಿಸಿ, 3 ತಿಂಗಳು ಅತ್ಯಾಚಾರ! ಬಲ್ಲಿಯಾ: ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಗ್ರಾಮವೊಂದರ ಬಾಲಕಿಯನ್ನು (15) ಅಪಹರಿಸಿ, ಹಿಮಾಚಲ ಪ್ರದೇಶಕ್ಕೆ ಕರೆದೊಯ್ದು ಸುಮಾರು ಮೂರು ತಿಂಗಳ ಕಾಲ ವ್ಯಕ್ತಿಯೊಬ್ಬ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಆರೋಪಿಯನ್ನು ನೇಪಾಳದ ಪರ್ಸಾ ಜಿಲ್ಲೆಯ 26 ವರ್ಷದ ಯುವಕ ಎಂದು ಗುರುತಿಸಲಾಗಿದೆ. ಆರೋಪಿಯು ಹಿಮಾಚಲ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ. ಸಾಮಾಜಿಕ ಮಾಧ್ಯಮವೊಂದರಲ್ಲಿ ಸಂತ್ರಸ್ತೆಯೊಂದಿಗೆ ಸ್ನೇಹ ಬೆಳಸಿದ್ದ ಆರೋಪಿ, ಕೆಲವು ದಿನಗಳ ನಂತರ ಆಕೆಯ ಗ್ರಾಮದಲ್ಲಿಯೇ ಭೇಟಿ ಮಾಡುವುದಾಗಿ ತಿಳಿಸಿದ್ದಾನೆ. ಭೇಟಿ ವೇಳೆ ಆಕೆಯನ್ನು ಅಪಹರಿಸಿ, ಹಿಮಾಚಲ ಪ್ರದೇಶಕ್ಕೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ತಿಳಿಸಿರುವುದಾಗಿ ಪೊಲೀಸ್‌ ವರಿಷ್ಠಾಧಿಕಾರಿ ರಂಜನ್‌ ವರ್ಮ ಮಾಹಿತಿ ನೀಡಿದ್ದಾರೆ. ಜನವರಿ 29ರಂದು ಬಾಲಕಿ ನಾಪತ್ತೆಯಾಗಿದ್ದಳು. ಆಕೆಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಳಿಕ ಆಕೆಯನ್ನು ರಕ್ಷಿಸಿ, ಗ್ರಾಮಕ್ಕೆ ಕರೆತರಲಾಗಿದೆ ಎಂದು ರಂಜನ್‌ ಹೇಳಿದ್ದಾರೆ. ಈ ಪ್ರಕರಣ ಸಂಬಂಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.