| ಪ್ರಚಾರದ ವೇಳೆ ಹಣ ಹಂಚಿದ ಆರೋಪ: ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ಮುಜಾಫರ್‌ಪುರ: ಲೋಕಸಭೆ ಚುನಾವಣಾ ಪ್ರಚಾರದ ವೇಳೆ ಜನರಿಗೆ ಹಣ ಹಂಚಿದ್ದಾರೆ ಎಂಬ ದೂರು ಆಧರಿಸಿ ಸಾಹೇಬ್‌ಪುರ ಶಾಸಕ ರಾಜುಕುಮಾರ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೈಶಾಲಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ, ಬಿಜೆಪಿ ಅಭ್ಯರ್ಥಿ ವೀಣಾ ದೇವಿ ಪರ ಎಲ್‌ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ರೋಡ್ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ರಾಜುಕುಮಾರ್ ಸಿಂಗ್ ಅವರು ನೆರೆದಿದ್ದ ಜನರಿಗೆ ಹಣ ಹಂಚಿದ್ದರು. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ವೈಶಾಲಿ ಲೋಕಸಭಾ ಕ್ಷೇತ್ರದ ಆರ್‌ಜೆಡಿ ಅಭ್ಯರ್ಥಿ ವಿಜಯ್ ಕುಮಾರ್ ಶುಕ್ಲಾ ಅವರು ರಾಜುಕುಮಾರ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಮುಜಾಫರ್‌ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಬ್ರತ್ ಕುಮಾರ್ ಸೇನ್ ಹೇಳಿದ್ದಾರೆ. ರಾಜುಕುಮಾರ್ ಸಿಂಗ್ ಹಣ ಹಂಚುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸುಬ್ರತ್ ಕುಮಾರ್ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ರಾಜುಕುಮಾರ್, ನೀರಿನ ಬಾಟಲಿಗಳನ್ನು ತರಲು ಪಕ್ಷದ ಕಾರ್ಯಕರ್ತನಿಗೆ ಹಣ ನೀಡಿದ್ದೇನೆ. ಆದರೆ, ಪ್ರತಿಸ್ಪರ್ಧಿಗಳು ಘಟನೆಯ ಬಗ್ಗೆ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.