ಕುವೈತ್ ಅಗ್ನಿ ದುರಂತ: ಭಾರತ ತಲುಪಿದ 45 ಮೃತದೇಹ ಕೊಚ್ಚಿ/ತಿರುವನಂತಪುರಂ/ದೆಹಲಿ: ಕುವೈತ್ ಅಗ್ನಿ ಅವಘಡದಲ್ಲಿ ಮೃತಪಟ್ಟ 45 ಭಾರತೀಯರ ಮೃತದೇಹಗಳನ್ನು ಶುಕ್ರವಾರ ಕೇರಳಕ್ಕೆ ತರಲಾಯಿತು. 45 ಮೃತದೇಹಗಳನ್ನು ಹೊತ್ತ ವಿಶೇಷ ವಿಮಾನವು ಬೆಳಗ್ಗೆ 10.30ಕ್ಕೆ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು. ಈ ಪೈಕಿ ಕೇರಳದ 23, ತಮಿಳುನಾಡಿನ 7 ಮತ್ತು ಕರ್ನಾಟಕದ ಒಬ್ಬರ ಮೃತದೇಹಗಳನ್ನು ಕೊಚ್ಚಿ ನಿಲ್ದಾಣದಲ್ಲಿಯೇ ಇಳಿಸಲಾಯಿತು. ಉಳಿದ 14 ಮೃತದೇಹಗಳನ್ನು ಅದೇ ವಿಮಾನದಲ್ಲಿ ದೆಹಲಿಗೆ ಕೊಂಡೊಯ್ಯಲಾಯಿತು. ಈ ಪ್ರಕ್ರಿಯೆಯ ಉಸ್ತುವಾರಿ ವಹಿಸಿದ್ದ ವಿದೇಶಾಂಗ ಖಾತೆಯ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್, ಅವರೂ ಜೊತೆಗಿದ್ದರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಸಂಪುಟ ಸಹೋದ್ಯೋಗಿಗಳು, ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, ಕೇಂದ್ರ ಸಚಿವ ಸುರೇಶ್ ಗೋಪಿ, ತಮಿಳುನಾಡಿನ ಸಚಿವ ಗಿಂಗೀ ಎಸ್.ಮಸ್ತಾನ್ ಮುಂತಾದವರು ಈ ವೇಳೆ ಹಾಜರಿದ್ದು, ಮೃತದೇಹಗಳಿಗೆ ಅಂತಿಮ ನಮನ ಸಲ್ಲಿಸಿದರು. ಮೃತರಿಗೆ ಕೇರಳ ಪೊಲೀಸರು ಗೌರವ ನಮನ ಸಲ್ಲಿಸಿದರು. ಶುಕ್ರವಾರ ಬೆಳಿಗ್ಗೆ ಕೊಚ್ಚಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಡುಬಂದ ದೃಶ್ಯ ಹೃದಯ ವಿದ್ರಾವಕವಾಗಿತ್ತು. ದೂರದ ದೇಶದಲ್ಲಿ ಕೆಲಸ ಮಾಡಲು ಹೋಗಿ ಮೃತದೇಹಗಳಾಗಿ ಬಂದವರನ್ನು ಕೊನೆಯ ಬಾರಿಗೆ ನೋಡಲು ಕುಟುಂಬಸ್ಥರು ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದಿದ್ದರು. ಎಲ್ಲರ ಮುಖದಲ್ಲೂ ಶೋಕ ಮಡುಗಟ್ಟಿತ್ತು. ಮಲ್ಲಪ್ಪಲ್ಲಿಯ ಸಿಬಿನ್ ಇಬ್ರಾಹಿಂ ಶವ ಪೆಟ್ಟಿಗೆಯ ಸುತ್ತ ತನ್ನ ಬಾಹುಗಳನ್ನು ಚಾಚಿ ಅವರ ತಂದೆ ಕಣ್ಣೀರುಗರೆದರು. ಚೆಂಗಾನೂರಿನ ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದು ದುಃಖವನ್ನು ದುಪ್ಪಟ್ಟುಗೊಳಿಸಿತ್ತು. ಮ್ಯಾಥ್ಯೂ ಥಾಮಸ್ (53) ಮತ್ತು ಶಿಬು ವರ್ಗೀಸ್ (30) ಅಗ್ನಿ ಅವಘಢದಲ್ಲಿ ಸಾವನ್ನಪ್ಪಿದ್ದಾರೆ. ಶಿಬು ಎನ್‌ಬಿಟಿಸಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು, ಮ್ಯಾಥ್ಯೂ ಅದೇ ಕಂಪನಿಯ ಬೇರೊಂದು ವಿಭಾಗದಲ್ಲಿದ್ದರು. 14 ಮಂದಿಯ ಮೃತದೇಹಗಳನ್ನು ಹೊತ್ತಿದ್ದ ಸೇನಾ ವಿಮಾನವು ಸಂಜೆ ದೆಹಲಿ ಮುಟ್ಟಿತು. ವಿಮಾನ ನಿಲ್ದಾಣದಲ್ಲಿ ಮೃತದೇಹಗಳನ್ನು ವಿಮಾನದಿಂದ ಕೆಳಗಿಳಿಸುವಾಗ ಸಂಸದರಾದ ಯೋಗೇಂದರ್ ಚಂದೋಲಿಯಾ ಮತ್ತು ಕಮಲ್‌ಜಿತ್ ಶೆರಾವತ್ ಅವರು ಕೈಮುಗಿದು ಗೌರವ ಸಲ್ಲಿಸಿದರು. ಇನ್ನಿಬ್ಬರು ಮಲಯಾಳಿಗಳು ಅವಘಡದಲ್ಲಿ ಮೃತರಾಗಿದ್ದಾರೆ ಎಂದು ವರದಿಯಾಗಿದೆ. ಆದರೆ, ಅವರ ಗುರುತು ಇನ್ನೂ ಪತ್ತೆಯಾಗಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.