ಎನ್‌ಸಿಪಿಗೆ ಮರು ಸೇರ್ಪಡೆಗೊಂಡ ಸೂರ್ಯಕಾಂತ ಮುಂಬೈ: ಬಿಜೆಪಿಗೆ ರಾಜೀನಾಮೆ ನೀಡಿದ್ದ ಹಿರಿಯ ರಾಜಕಾರಣಿ ಸೂರ್ಯಕಾಂತ ಪಾಟೀಲ್ ಮಂಗಳವಾರ ಶರದ್ ಪವಾರ್ ನೇತೃತ್ವದ ಎನ್‌ಸಿಪಿಗೆ (ಎಸ್‌ಪಿ) ಮರು ಸೇರ್ಪಡೆಗೊಂಡರು. ಶರದ್ ಪವಾರ್ ಹಾಗೂ ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಅವರು ಸೂರ್ಯಕಾಂತ ಸೇರ್ಪಡೆಯನ್ನು ಸ್ವಾಗತಿಸಿದ್ದಾರೆ. ಹತ್ತು ವರ್ಷದ ಹಿಂದೆ ಎನ್‌ಸಿಪಿ ತೊರೆದು ಬಿಜೆಪಿಗೆ ಸೇರಿದ್ದ ಸೂರ್ಯಕಾಂತ ಪಾಟೀಲ್, ಇದೀಗ ಮತ್ತೆ ಮಾತೃ ಪಕ್ಷಕ್ಕೆ ಹಿಂದಿರುಗಿದ್ದಾರೆ. ಪತ್ರಕರ್ತರೂ ಆಗಿದ್ದ ಸೂರ್ಯಕಾಂತ ಅವರು ಮರಾಠವಾಡ ಪ್ರಾಂತ್ಯದ ನಾಂದೇಡ್, ಹಿಂಗೋಲಿ, ಪರ್ಭಾನಿ ಹಾಗೂ ಬೀಡ್‌ ಜಿಲ್ಲೆಗಳಲ್ಲಿ ಜನಪ್ರಿಯರಾಗಿದ್ದಾರೆ. ‌ಶರದ್ ಪವಾರ್ 1999ರಲ್ಲಿ ಕಾಂಗ್ರೆಸ್‌ ತೊರೆದು ಎನ್‌ಸಿಪಿ ಸ್ಥಾಪಿಸಿದಾಗ, ಸೂರ್ಯಕಾಂತ ಪಾಟೀಲ್ ಅವರು ಪವಾರ್‌ ಅವರನ್ನು ಹಿಂಬಾಲಿಸಿದ್ದರು. ಕಾಂಗ್ರೆಸ್‌ನ ಮುಖಂಡ, ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಅವರು ಬಿಜೆಪಿಗೆ ಸೇರ್ಪಡೆಗೊಂಡ ನಂತರ ಮಹಾ ವಿಕಾಸ್ ಆಘಾಡಿ ಮೈತ್ರಿಕೂಟಕ್ಕಾದ ನಷ್ಟವನ್ನು ಸೂರ್ಯಕಾಂತ ಸೇರ್ಪಡೆಯು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸರಿದೂಗಿಸಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.