| ಭಾರಿ ಮಳೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ ಶ್ರೀನಗರ: ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಮರನಾಥ ಯಾತ್ರೆಯನ್ನು ಎರಡು ಮಾರ್ಗಗಳಲ್ಲಿಯೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಶುಕ್ರವಾರ ರಾತ್ರಿಯಿಂದ ಅಮರನಾಥ ಯಾತ್ರೆಗೆ ತೆರಳುವ ಬಾಲ್ಟಾಲ್ ಮತ್ತು ಪಹಲ್ಗಾಮ್‌ ಮಾರ್ಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ಆದ್ದರಿಂದ ಭಕ್ತಾಧಿಗಳ ಸುರಕ್ಷತೆಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದ್ದಾರೆ. ಜೂನ್‌ 29ರಿಂದ ಅಮರನಾಥ ಯಾತ್ರೆ ಪ್ರಾರಂಭಗೊಂಡಿದ್ದು, ದಕ್ಷಿಣ ಕಾಶ್ಮೀರದ ಅನಂತನಾಗ್‌ನ ಪಹಲ್ಗಾಮ್ ಮೂಲಕ 48-ಕಿಮೀ ಮಾರ್ಗದಲ್ಲಿ ಮತ್ತು ಮಧ್ಯ ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಿಂದ ಬಾಲ್ಟಾಲ್ ಮೂಲಕ 14 ಕಿಮೀ ಮಾರ್ಗದಲ್ಲಿ ಯಾತ್ರೆಯನ್ನು ಕೈಗೊಳ್ಳಬಹುದಾಗಿದೆ. ಈವರೆಗೆ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿ ದೇವರ ದರ್ಶನ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಸುಮಾರು ನಾಲ್ಕುವರೆ ಲಕ್ಷ ಭಕ್ತಾದಿಗಳು ದೇಗುಲಕ್ಕೆ ಭೇಟಿ ನೀಡಿದ್ದರು. ಯಾತ್ರೆಯು ಆಗಸ್ಟ್‌ 19ರಂದು ಮುಕ್ತಾಯವಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.