| ಪರೀಕ್ಷಾ ವ್ಯವಸ್ಥೆಯಲ್ಲೇ ಸಮಸ್ಯೆ ಇದೆ: ರಾಹುಲ್‌ ನವದೆಹಲಿ (ಪಿಟಿಐ): ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿಯೇ ಗಂಭೀರವಾದ ಸಮಸ್ಯೆ ಇದೆ. ಇದು ‘ನೀಟ್‌’ ಸೇರಿದಂತೆ ಬಹುತೇಕ ಎಲ್ಲ ಪ್ರಮುಖ ಪರೀಕ್ಷೆಗಳ ಮೇಲೆ ಪರಿಣಾಮ ಬೀರಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಸೋಮವಾರ ಆರೋಪಿಸಿದರು. ಲೋಕಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಅವರು, ‘ಈ ಪರೀಕ್ಷಾ ವ್ಯವಸ್ಥೆಯಿಂದ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ಆದರೆ, ಶಿಕ್ಷಣ ಸಚಿವರಿಗೆ ಇದರ ಮೂಲ ಸಮಸ್ಯೆ ಅರ್ಥವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಅವರು ತಮ್ಮೊಬ್ಬರನ್ನು ಬಿಟ್ಟು ಉಳಿದವರೆಲ್ಲರನ್ನೂ ದೂರುತ್ತಾರೆ’ ಎಂದು ಹೇಳಿದರು. ‘ಶ್ರೀಮಂತರು, ದೇಶದ ಪರೀಕ್ಷಾ ವ್ಯವಸ್ಥೆಯನ್ನೇ ಖರೀದಿಸಬಹುದು ಎಂಬಂತಾಗಿದೆ. ಇದು ವ್ಯವಸ್ಥಿತ ಸಮಸ್ಯೆ ಆಗಿರುವುದರಿಂದ, ಅದನ್ನು ವ್ಯವಸ್ಥಿತವಾಗಿ ಸರಿಪಡಲು ನೀವು ಏನು ಮಾಡುತ್ತಿದ್ದೀರಿ’ ಎಂದು ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ಪ್ರಶ್ನಿಸಿದರು. ಕಾಂಗ್ರೆಸ್‌ ಸದಸ್ಯ ಮಾಣಿಕಂ ಟ್ಯಾಗೋರ್‌ ಅವರು, ‘ದೇಶದಲ್ಲಿ ಏಳು ವರ್ಷಗಳಲ್ಲಿ 70 ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ಇವುಗಳ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ. ಇದರ ಹೊಣೆಹೊತ್ತು ಕೆಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡುತ್ತಾರೆಯೇ’ ಎಂದು ಕೇಳಿದರು. ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪನಾಯಕ ಗೌರವ್‌ ಗೊಗೊಯ್‌ ಅವರು, ಪ್ರಧಾನ್‌ ಅವರ ರಾಜೀನಾಮೆಗೆ ಒತ್ತಾಯಿಸಿ ಘೋಷಣೆ ಕೂಗಿದರು. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರು, ‘ಈ ಸರ್ಕಾರವು ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ದಾಖಲೆ ಮಾಡಿದೆ’ ಎಂದು ಆರೋಪಿಸಿದರು. ಶಿಕ್ಷಣ ವ್ಯವಸ್ಥೆ ಮೇಲೆ ಪರಿಣಾಮ: ‘ಈ ವಿಷಯದ ಬಗ್ಗೆ ರಚನಾತ್ಮಕವಾಗಿ ಚರ್ಚಿಸುವ ಅಗತ್ಯವಿದೆ’ ಎಂದು ಒತ್ತಿ ಹೇಳಿದ ಸ್ಪೀಕರ್‌ ಓಂ ಬಿರ್ಲಾ ಅವರು, ‘ದೇಶದ ಎಲ್ಲ ಪರೀಕ್ಷೆಗಳ ಮೇಲೆ ಪ್ರಶ್ನೆಗಳನ್ನು ಎತ್ತಿದರೆ, ಅದು ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ’ ಎಂದರು. ಈ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ವ್ಯವಸ್ಥೆ ಸುಧಾರಣೆಗೆ ಚರ್ಚಿಸುವುದು ಒಳಿತು ಎಂದು ಅವರು ಹೇಳಿದರು. ಸ್ಪೀಕರ್‌ ಅವರು ಚರ್ಚೆಯನ್ನು ಸಮಾಪ್ತಿಗೊಳಿಸಿದ ಬಳಿಕ ರಾಹುಲ್‌ ಗಾಂಧಿ ಅವರು ಮಾತನಾಡಲು ಮುಂದಾದರು. ಅದಕ್ಕೆ ಸ್ಪೀಕರ್‌ ಅವಕಾಶ ನೀಡಲಿಲ್ಲ. ಇದನ್ನು ವಿರೋಧಿಸಿ ಕಾಂಗ್ರೆಸ್‌, ಟಿಎಂಸಿ, ಡಿಎಂಕೆ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ನಡೆಸಿದರು. ಏಳು ವರ್ಷಗಳಲ್ಲಿ ಸೋರಿಕೆಯಾದ ಸಾಕ್ಷ್ಯವಿಲ್ಲ: ಪ್ರಧಾನ್‌ ‘ಇಡೀ ಪರೀಕ್ಷಾ ವ್ಯವಸ್ಥೆಯನ್ನೇ ಟೀಕಿಸುವುದು ಸರಿಯಲ್ಲ. ಕಳೆದ ಏಳು ವರ್ಷಗಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ’ ಎಂದು ಕೆಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಲೋಕಸಭೆಯಲ್ಲಿ ಉತ್ತರಿಸಿದರು. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಆರಂಭವಾದಾಗಿನಿಂದ 240 ಪರೀಕ್ಷೆಗಳನ್ನು ನಡೆಸಿದ್ದು 4.5 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆದಿದ್ದಾರ. 2018ರಿಂದ ಎನ್‌ಟಿಎ ಒಟ್ಟು 16 ಪರೀಕ್ಷೆಗಳನ್ನು ಮುಂದೂಡಿದೆ. ಕೋವಿಡ್‌–19 ಆಡಳಿತಾತ್ಮಕ ಸಾಗಣೆ ಮತ್ತು ತಾಂತ್ರಿಕ ಕಾರಣಗಳಿಂದ ಇವುಗಳನ್ನು ಮುಂದೂಡಲಾಗಿತ್ತು ಎಂದು ಸಚಿವರು ಮಾಹಿತಿ ನೀಡಿದರು. ‘ನಾವು ಏನನ್ನೂ ಮುಚ್ಚಿಡುತ್ತಿಲ್ಲ. ಎಲ್ಲವೂ ದಾಖಲೆಯಲ್ಲಿದೆ. ನಮ್ಮ ನಾಯಕರಾದ ಪ್ರಧಾನಿ ಅವರ ಅನುಗ್ರಹದಿಂದ ನಾನು ಇಲ್ಲಿದ್ದೇನೆ. ಉತ್ತರದಾಯಿತ್ವದ ವಿಷಯ ಬಂದಾಗ ನಮ್ಮ ಸರ್ಕಾರ ಸಾಮೂಹಿಕವಾಗಿ ಜವಾಬ್ದಾರಿ ತೆಗೆದುಕೊಳ್ಳುತ್ತದೆ’ ಎಂದು ಹೇಳಿದರು. ರಾಹುಲ್‌ ಗಾಂಧಿ ಮತ್ತು ಅವರ ಪಡೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಆದರೆ ಯಪಿಎ ಆಡಳಿತ ಅವಧಿ ಮತ್ತು ಉತ್ತರ ಪ್ರದೇಶದಲ್ಲಿ ಅಖಿಲೇಶ್‌ ಯಾದವ್‌ ಅವರ ಅವಧಿಯಲ್ಲಿ ಆದ ಪ್ರಶ್ನೆ ಪತ್ರಿಕೆ ಸೋರಿಕೆಗಳನ್ನು ಕೆದಕಿದರೆ ಭಾರೀ ಹಗರಣಗಳು ಹೊರಬರುತ್ತವೆ ಎಂದು ಪ್ರಧಾನ್‌ ತಿಳಿಸಿದರು. ಪರೀಕ್ಷಾ ನಕಲು ಸೇರಿದಂತೆ ಇತರ ದುಷ್ಕೃತ್ಯಗಳನ್ನು ತಡೆಯುವ ಮಸೂದೆಯನ್ನು ಕಾನೂನುಗೊಳಿಸಲು ಯುಪಿಎಗೆ ಏಕೆ ಸಾಧ್ಯವಾಗಲಿಲ್ಲ ಎಂದು ಅವರು ಪ್ರಶ್ನಿಸಿದರು. ಕಾನ್ಪುರದ ಇಬ್ಬರು ಅಧ್ಯಾಪಕರನ್ನು ನೇಮಕ ನವದೆಹಲಿ (ಪಿಟಿಐ): ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಕಾರ್ಯನಿರ್ವಹಣೆ ಮತ್ತು ಪರೀಕ್ಷಾ ಸುಧಾರಣೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ಪ್ರೊ. ಕೆ. ರಾಧಾಕೃಷ್ಣನ್‌ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿಗೆ ಐಐಟಿ ಕಾನ್ಪುರದ ಇಬ್ಬರು ಅಧ್ಯಾಪಕರನ್ನು ನೇಮಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ. ಕಂಪ್ಯೂಟರ್‌ ಸೈನ್ಸ್ ಮತ್ತು ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಆಮೆ ಕರ್ಕರೆ ಮತ್ತು ಸಹಾಯಕ ಪ್ರಾಧ್ಯಾಪಕಿ ದೆವಪ್ರಿಯಾ ರಾಯ್‌ ಅವರನ್ನು ಸಮಿತಿಯ ಸದಸ್ಯರನ್ನಾಗಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.