ಆಗಸ್ಟ್‌ 1ಕ್ಕೆ ಬಿಜೆಪಿ ನಾಯಕರ ಪ್ರತಿಕೃತಿ ದಹನ ನವದೆಹಲಿ: ಕೃಷಿ ಬೆಳೆಗಳಿಗೆ ಎಂಎಸ್‌ಪಿ ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಆಗಸ್ಟ್‌ 1ರಂದು ದೇಶದಾದ್ಯಂತ ಬಿಜೆಪಿ ನಾಯಕರ ಪ್ರತಿಕೃತಿಗಳನ್ನು ದಹಿಸುವ ಮತ್ತು ಆಗಸ್ಟ್‌ 15ರಂದು ಟ್ರ್ಯಾಕ್ಟರ್‌ ರ್‍ಯಾಲಿ ನಡೆಸುವ ಮೂಲಕ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. ಆಗಸ್ಟ್‌ 1ರಂದು ದೇಶದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸೇರುವ ರೈತರು ಆಡಳಿತಾರೂಢ ಬಿಜೆಪಿ ನಾಯಕರ ಪ್ರತಿಕೃತಿಗಳನ್ನು ದಹಿಸಲಿದ್ದಾರೆ. ಅದೇ ರೀತಿ ಆಗಸ್ಟ್‌ 15ರಂದು ಎಲ್ಲ ಜಿಲ್ಲೆಗಳಲ್ಲಿ ರೈತರು ಟ್ರ್ಯಾಕ್ಟರ್‌ ರ್‍ಯಾಲಿ ನಡೆಸಲಿದ್ದಾರೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್‌ ಮಜ್ದೂರ್‌ ಮೋರ್ಚಾ (ಕೆಎಂಎಂ) ಹೇಳಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಎಂಎಂ ನಾಯಕ ಸರವಣ ಸಿಂಗ್‌ ಪಂಢೇರ್, ರೈತರು ‘ದೆಹಲಿ ಚಲೋ’ ಹಮ್ಮಿಕೊಂಡು ಆಗಸ್ಟ್‌ 31ಕ್ಕೆ 200 ದಿನಗಳು ಪೂರ್ಣಗೊಳ್ಳಲಿದೆ. ಅಂದು ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳ ಖನೌರಿ ಮತ್ತು ಶಂಭು ಗಡಿಗಳಲ್ಲಿ ಸೇರುವಂತೆ ಜನರಿಗೆ ಕರೆ ನೀಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.