ನಟ ಅಕ್ಷಯ್ ಕುಮಾರ್‌ಗೆ ಕೋವಿಡ್: ಅನಂತ್–ರಾಧಿಕಾ ವಿವಾಹಕ್ಕೆ ಗೈರು ಮುಂಬೈ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರಿಗೆ ಕೋವಿಡ್‌–19 ದೃಢಪಟ್ಟಿದ್ದು, ಮನೆಯಲ್ಲಿಯೇ ಪ್ರತ್ಯೇಕವಾಸದಲ್ಲಿ ಉಳಿದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಅವರು ಉದ್ಯಮಿ ಮುಕೇಶ್‌ ಅಂಬಾನಿ ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರ ಮದುವೆಗೆ ಗೈರಾಗಲಿದ್ದಾರೆ ಎಂದು ವರದಿಯಾಗಿದೆ. ಮುಂಬೈನ ಜಿಯೊ ವರ್ಲ್ಡ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಇಂದು ರಾತ್ರಿ 8ಕ್ಕೆ ಅನಂತ್–ರಾಧಿಕಾ ವಿವಾಹ ನಡೆಯಲಿದೆ. ಅನಂತ್‌ ಅವರು ಅಕ್ಷಯ್‌ ಅವರನ್ನು ಸ್ವತಃ ಭೇಟಿಯಾಗಿ ಆಮಂತ್ರಣ ನೀಡಿದ್ದರು. ಹೀಗಾಗಿ, ವಿವಾಹ ಸಮಾರಂಭದಲ್ಲಿ ಅಕ್ಷಯ್‌ ಭಾಗವಹಿಸುವುದು ನಿಚ್ಚಳವಾಗಿತ್ತು. ಆದರೆ, ಕೋವಿಡ್‌ನಿಂದಾಗಿ ಅದಕ್ಕೆ ತೊಡಕಾಗಿದೆ. ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಡಬ್ಲ್ಯೂಡಬ್ಲ್ಯೂಇ () ಕುಸ್ತಿಪಟು, ಹಾಲಿವುಡ್‌ ನಟ ಜಾನ್ ಸೀನಾ, ಅಮೆರಿಕದ ಸೆಲೆಬ್ರಿಟಿ ಕಿಮ್ ಕರ್ದಾಶಿಯಾನ್, ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಸೇರಿದಂತೆ ಖ್ಯಾತನಾಮರು ಈಗಾಗಲೇ ಜಿಯೊ ವರ್ಲ್ಡ್‌ ಕನ್ವೆನ್ಷನ್‌ ಸೆಂಟರ್‌ಗೆ ಬಂದಿದ್ದಾರೆ. ಬಾಕ್ಸರ್‌ ಮೈಕ್‌ ಟೈಸನ್‌, ಹಾಲಿವುಡ್‌ ಹಾಗೂ ಬಾಲಿವುಡ್‌ನ ತಾರೆಯರು, ಜಾಗತಿಕ ರಾಜಕೀಯ ನಾಯಕರೂ ಪಾಲ್ಗೊಳ್ಳುವ ಸಾಧ್ಯತೆ ಇದೆ. ಮದುವೆಯ ಸಂಭ್ರಮಾಚರಣೆ ಜುಲೈ 14ರವರೆಗೂ ನಡೆಯಲಿದೆ. ಜುಲೈ 13ರಂದು 'ಶುಭ ಆಶೀರ್ವಾದ' ಹಾಗೂ ಜುಲೈ 14ರಂದು 'ಮಂಗಳ ಉತ್ಸವ' ನಡೆಯಲಿದೆ. 'ಸರ್ಫೀರಾ' ತೆರೆಗೆ ಅಕ್ಷಯ್‌ ಅಭಿನಯದ 'ಸರ್ಫಿರಾ' ಸಿನಿಮಾ ಇಂದು ತೆರೆ ಕಂಡಿದೆ. ಅನಾರೋಗ್ಯದ ನಡುವೆಯೂ ಅವರು ಚಿತ್ರದ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ತಮ್ಮೊಂದಿಗೆ ಇದ್ದ (ಚಿತ್ರತಂಡದ) ಕೆಲವರಿಗೆ ಕೋವಿಡ್‌ ದೃಢಪಟ್ಟಿದ್ದರಿಂದ ತಾವೂ ಪರೀಕ್ಷೆ ಮಾಡಿಸಿಕೊಂಡಿದ್ದರು. ಇಂದು ಬೆಳಿಗ್ಗೆ ಕೋವಿಡ್‌ ದೃಢಪಟ್ಟಿದೆ. ಅಕ್ಷಯ್‌ ಜೊತೆಗೆ, ಪರೇಶ್‌ ರಾವಲ್‌, ರಾಧಿಕಾ ಮದನ್‌ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ 'ಸರ್ಫಿರಾ' ತಮಿಳಿನ 'ಸೂರರೈ ಪೊಟ್ರು'ವಿನ ಹಿಂದಿ ರಿಮೇಕ್‌. ಎರಡೂ ಭಾಷಗಳಲ್ಲಿ ಸುಧಾ ಕೊಂಗಾರ ಅವರೇ ನಿರ್ದೇಶನ ಮಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.