ರಾಷ್ಟ್ರೀಯ ನೇಮಕಾತಿ ಏಜೆನ್ಸಿ ನಿಷ್ಕ್ರಿಯ: ಕಾಂಗ್ರೆಸ್‌ ವಾಗ್ದಾಳಿ ನವದೆಹಲಿ: ‘ರಾಷ್ಟ್ರೀಯ ನೇಮಕಾತಿ ಏಜೆನ್ಸಿ (ಎನ್‌ಆರ್‌ಎ) ಕಳೆದ 4 ವರ್ಷಗಳಲ್ಲಿ ಏಕೆ ಒಂದೂ ಪರೀಕ್ಷೆ ನಡೆಸಿಲ್ಲವೇಕೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಪ್ರಶ್ನಿಸಿದ್ದಾರೆ. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ದೇಶದಲ್ಲಿನ ಶಿಕ್ಷಣದ ವ್ಯವಸ್ಥೆಯನ್ನು ನಾಶಪಡಿಸುವ ಕಾರ್ಯಾಚರಣೆ ಕೈಗೊಂಡಿದೆ ಎಂದೂ ವಾಗ್ದಾಳಿ ನಡೆಸಿದ್ದು, ಎನ್‌ಆರ್‌ಎ ಕುರಿತು ಮೂರು ಪ್ರಶ್ನೆಗಳನ್ನು ಎತ್ತಿದ್ದಾರೆ. ‘3–4 ವರ್ಷಗಳಲ್ಲಿ ಎಂಟು ಕೋಟಿ ಹೊಸ ಉದ್ಯೋಗ ಸೃಷ್ಟಿಯಾಗಿದೆ. ಇದು ನಿರುದ್ಯೋಗ ಕುರಿತ ಅಪಪ್ರಚಾರವನ್ನು ತಣ್ಣಗಾಗಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮುಂಬೈನಲ್ಲಿ ಹೇಳಿದ್ದರು. ಇದಕ್ಕೆ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಖರ್ಗೆ, ‘ನರೇಂದ್ರ ಮೋದಿಯವರೇ, ಉದ್ಯೋಗ ಸೃಷ್ಟಿ ಕುರಿತು ಮುಂಬೈನಲ್ಲಿ ಶನಿವಾರ ಸುಳ್ಳುಗಳ ಸರಮಾಲೆಯನ್ನೇ ಹೆಣೆದಿದ್ದೀರಿ. ಎನ್ಆರ್‌ಎ ಸ್ಥಾಪನೆ ಘೋಷಿಸುವಾಗ ನೀವು ಏನು ಹೇಳಿದ್ದೀರಿ ಎಂದು ನೆನಪಿಸಲು ಬಯಸುತ್ತೇನೆ’ ಎಂದಿದ್ದಾರೆ. 2020ರ ಆಗಸ್ಟ್‌ನಲ್ಲಿ ಎನ್‌ಆರ್‌ಎ ಉದ್ಘಾಟಿಸುತ್ತಾ, ‘ಇದು ಕೋಟ್ಯಂತರ ಯುವಜನರಿಗೆ ವರದಾನ. ಇದು ಸಾಮಾನ್ಯ ಅರ್ಹತಾ ಪರೀಕ್ಷೆ ನಡೆಸಲಿದ್ದು, ಬಹುಹಂತದ ಪರೀಕ್ಷೆಗಳು ಇರುವುದಿಲ್ಲ. ಸಮಯ ಮತ್ತು ಸಂಪನ್ಮೂಲ ಉಳಿಸಲಿದೆ, ಪಾರದರ್ಶಕತೆ ಇರಲಿದೆ ಎಂದಿದ್ದಿರಿ’ ಎಂದು ಹೇಳಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಅನ್ನು ‘ವಂಚನೆ, ಪ್ರಶ್ನೆಪತ್ರಿಕೆ ಸೋರಿಕೆ, ಹಗರಣ’ಕ್ಕೆ ಬಳಸಲಾಯಿತು. ಇದೇ ವೇಳೆ ಪರೀಕ್ಷೆ ನಡೆಸಲು ಎನ್‌ಆರ್‌ಎಗೆ ಅವಕಾಶ ನೀಡಲಿಲ್ಲ. ಆರ್‌ಎಸ್‌ಎಸ್‌–ಬಿಜೆಪಿ ವ್ಯವಸ್ಥೆಯನ್ನೇ ಹಾಳುಗೆಡವಿ, ಯುವಜನರ ಭವಿಷ್ಯ ಹೊಸಕಿಹಾಕಿತು ಎಂದು ಖರ್ಗೆ ಟೀಕಿಸಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಇದೇ ವಿಷಯ ಕುರಿತು ಎಕ್ಸ್‌ನಲ್ಲಿ ಪ್ರಶ್ನಿಸಿದ್ದು, ‘ಎನ್‌ಆರ್‌ಎ ಕೂಡ ಎನ್‌ಟಿಎ ರೀತಿಯಲ್ಲಿಯೇ ವಿಫಲವಾಗಿದೆ’ ಎಂದು ಹೇಳಿದ್ದಾರೆ. ಎನ್ಆರ್‌ಎ 4 ವರ್ಷಗಳಲ್ಲಿ ಏಕೆ ಒಂದೂ ಪರೀಕ್ಷೆಯನ್ನು ನಡೆಸಿಲ್ಲ? ₹1517.57 ಕೋಟಿ ಹಣ ಲಭ್ಯವಿದ್ದರೂ 4 ವರ್ಷಗಳಲ್ಲಿ ₹ 58 ಕೋಟಿ ಅಷ್ಟೇ ವೆಚ್ಚವಾಗಿದೆ ಏಕೆ? ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿಗಾಗಿ ಎನ್ಆರ್‌ಎ ರಚಿಸಲಾಗಿತ್ತು. ಪರಿಶಿಷ್ಟರು ಒಬಿಸಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಯುವಜನರು ಮೀಸಲು ಹಕ್ಕುಗಳಿಂದ ವಂಚಿತರಾಗಿದ್ದಾಗ ಎನ್‌ಆರ್‌ಎ ಉದ್ದೇಶಪೂರ್ವಕವಾಗಿಯೇ ನಿಷ್ಕ್ರಿಯವಾಗಿತ್ತೆ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.