ಮುಂಬೈ | ಕೊಲ್ಹಾಪುರ ಹಿಂಸಾಚಾರ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ ಮುಂಬೈ/ ಛತ್ರಪತಿ ಸಂಭಾಜಿನಗರ: ಕೊಲ್ಹಾಪುರದ ವಿಶಾಲಗಢ ಕೋಟೆಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ವೇಳೆ ನಡೆದ ಹಿಂಸಾಚಾರದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಅಲ್ಲದೆ, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಕಾಂಗ್ರೆಸ್ ಒತ್ತಾಯಿಸಿದೆ. ಈ ಸಂಬಂಧ ಗುರುವಾರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ಪತ್ರ ಬರೆದಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ ವಡೆಟ್ಟಿವಾರ್, ‘ವಿಶಾಲಗಢದಲ್ಲಿ ಅತಿಕ್ರಮಣ ತೆರವು ಹೆಸರಿನಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು, ನಿರ್ದಿಷ್ಟ ಸಮುದಾಯವೊಂದನ್ನು ಗುರಿಯಾಗಿಸಿಕೊಂಡಿದೆ’ ಎಂದು ಆರೋಪಿಸಿದ್ದಾರೆ. ‘ವಿಶಾಲಗಢ ಹಿಂಸಾಚಾರವು ಸರ್ಕಾರಿ ಪ್ರಾಯೋಜಿತವಾಗಿದ್ದು, ಈ ಕೃತ್ಯದ ಪ್ರಮುಖ ತಪ್ಪಿತಸ್ಥನ ನಿಜಸ್ವರೂಪವನ್ನು ಬಯಲು ಮಾಡಬೇಕು. ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲೇ ದುರದೃಷ್ಟಕರ ಘಟನೆಯೊಂದು ನಡೆದುಹೋಗಿದೆ. ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಬೇಕು ಮತ್ತು ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತು ಮಾಡಬೇಕು’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವಿಶಾಲಗಢದಲ್ಲಿ ಭಾನುವಾರ ಅತಿಕ್ರಮಣ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ ಉದ್ರಿಕ್ತರ ಗುಂಪು ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿ, ಆಸ್ತಿಪಾಸ್ತಿಗೆ ಹಾನಿ ಮಾಡಿತ್ತು. ಈ ಘಟನೆ ಸಂಬಂಧ 21 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಐಎಂಐಎಂನಿಂದ ಪ್ರತಿಭಟನೆ ಇಂದು: ಈ ಹಿಂಸಾಚಾರ ಘಟನೆಯಲ್ಲಿ ಮಸೀದಿ ಮತ್ತು ಜನರ ಮನೆಗಳಿಗೆ ಹಾನಿಯಾಗಿದೆ ಎಂದು ಆರೋಪಿಸಿರುವ ಎಐಎಂಐಎಂ ಪಕ್ಷದ ಮಾಜಿ ಸಂಸದ ಇಮ್ತಿಯಾಜ್ ಜಲೀಲ್, ಶುಕ್ರವಾರ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.