ಎನ್‌ಡಿಎಯಿಂದ ಮಾತ್ರ ಸ್ಥಿರತೆ ಸಾಧ್ಯ: ಮೋದಿ ಮುಂಬೈ: ಬಿಜೆಪಿ ನೇತೃತ್ವದ ಎನ್‌ಡಿಎ ಮಾತ್ರ ಸ್ಥಿರತೆ ಮತ್ತು ನಿರಂತರತೆಯನ್ನು ಖಚಿತಪಡಿಸುತ್ತದೆ ಮತ್ತು ಭಾರತವನ್ನು ತ್ವರಿತ ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು. ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮುಂಬೈಗೆ ಮೊದಲ ಬಾರಿ ಭೇಟಿ ನೀಡಿದ ಅವರು, ‘ಮೂರನೇ ಅವಧಿಯಲ್ಲಿ ಎನ್‌ಡಿಎ ಸರ್ಕಾರವು ಮೂರು ಪಟ್ಟು ವೇಗವಾಗಿ ಕೆಲಸ ಮಾಡುತ್ತದೆ ಎಂದು ನಾನು ಹೇಳಿದ್ದೆ. ಅದನ್ನೀಗ ನೋಡುತ್ತಿದ್ದೇವೆ’ ಎಂದು ಅವರು ಹೇಳಿದರು. ದೇಶದ ವಿವಿಧೆಡೆ ನಡೆದ ವಿಧಾನಸಭಾ ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ ನೇತೃತ್ವದ ‘ಇಂಡಿಯಾ’ ಮೈತ್ರಿಯು 13ರಲ್ಲಿ 10 ಸ್ಥಾನಗಳನ್ನು ಗೆದ್ದಿರುವ ಬೆನ್ನಲ್ಲೇ ಪ್ರಧಾನಿ ಅವರಿಂದ ಈ ಹೇಳಿಕೆ ಬಂದಿದೆ. ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ನಕಲಿ ನಿರೂಪಣೆ ಮಾಡುವವರು ಅಭಿವೃದ್ಧಿ ವಿರೋಧಿಗಳಾಗಿದ್ದಾರೆ. ಅವರ ಸುಳ್ಳು, ವಂಚನೆಗಳು ಈಗ ಬಹಿರಂಗವಾಗುತ್ತಿವೆ’ ಎಂದರು. ದುರ್ಬಲರಿಗೆ ಮತ್ತು ವಂಚಿತರಿಗೆ ಆದ್ಯತೆ ನೀಡುವುದು ಎನ್‌ಡಿಎ ಸರ್ಕಾರದ ಅಭಿವೃದ್ದಿಯ ಮಾದರಿಯಾಗಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಬಡವರು ಮತ್ತು ರೈತರಿಗಾಗಿ ಪಕ್ಕಾ ಮನೆಗಳ ಬಗ್ಗೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು. ಮೂರು–ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಸುಮಾರು 8 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎಂಬ ಮಾಹಿತಿಯು ಇತ್ತೀಚೆಗೆ ಆರ್‌ಬಿಐ ಬಿಡುಗಡೆ ಮಾಡಿದ ವರದಿಯಲ್ಲಿದೆ. ಈ ಅಂಕಿ ಅಂಶಗಳು, ಸುಳ್ಳು ನಿರೂಪಣೆಗಳನ್ನು ಹರಡುವವರನ್ನು ಮೌನಗೊಳಿಸಿವೆ ಎಂದು ಅವರು ಹೇಳಿದರು. ಮೋದಿ ಅವರು ಮುಂಬೈನಲ್ಲಿ ಒಟ್ಟು ₹ 29,400 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಮಾಧ್ಯಮಗಳದ್ದು ಮಹತ್ವದ ಪಾತ್ರ: ಮೋದಿ ಭಾರತದ ಇತಿಹಾಸವನ್ನು ರೂಪಿಸುವಲ್ಲಿ ಮಾಧ್ಯಮಗಳು ಮಹತ್ವದ ಪಾತ್ರವನ್ನು ನಿರ್ವಹಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಶ್ಲಾಘಿಸಿದರು. ‘ದೇಶವನ್ನು ಸರಿ ದಿಕ್ಕಿನಲ್ಲಿ ಕರೆದೊಯ್ಯುವಲ್ಲಿ ಮತ್ತು ಪರಿಸ್ಥಿತಿಯನ್ನು ಬದಲಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿವೆ. ದೇಶಕ್ಕೆ ಮುಂದಿನ 25 ವರ್ಷಗಳ ಅವಧಿ ಬಹಳ ಮುಖ್ಯವಾಗಿದ್ದು ಈ ಅವಧಿಯಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸಲು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಮಹತ್ವದ ಪಾತ್ರ ನಿರ್ವಹಿಸಬೇಕಿವೆ’ ಎಂದು ಹೇಳಿದರು. ಮುಂಬೈನ ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿನ ಇಂಡಿಯನ್‌ ನ್ಯೂಸ್‌ಪೇಪರ್‌ ಸೊಸೈಟಿ (ಐಎನ್‌ಎಸ್‌) ಕಾರ್ಯಾಲಯದಲ್ಲಿ ಐಎನ್‌ಎಸ್‌ ಟವರ್ಸ್‌ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.