ಪ. ಬಂಗಾಳ: ಮನೆಯಿಂದ ಕಾಲುವೆಗೆ ಸುರಂಗ ತೋಡಿದ್ದ ನಕಲಿ ಚಿನ್ನದ ವಿಗ್ರಹ ಮಾರಾಟಗಾರ ಕೋಲ್ಕತ್ತ : ಪಶ್ಚಿಮ ಬಂಗಾಳದಲ್ಲಿ ನಕಲಿ ಚಿನ್ನದ ವಿಗ್ರಹ ಮಾರಾಟಗಾರನೊಬ್ಬನು ಮನೆಯಿಂದ ಕಾಲುವೆಯವರೆಗೆ ನಿರ್ಮಿಸಿದ್ದ ಸುರಂಗ ಮಾರ್ಗವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆರೋಪಿ ಸದ್ದಮ್‌ ಸರ್ದಾರ್‌ ಸೋಮವಾರ ಪೊಲೀಸರು ದಾಳಿ ನಡೆಸಿದ ವೇಳೆ ಸುರಂಗ ಮಾರ್ಗದಿಂದಲೇ ತಪ್ಪಿಸಿಕೊಂಡಿದ್ದಾನೆ ಎನ್ನುವ ಶಂಕೆಯಿದೆ. ನಕಲಿ ಚಿನ್ನದ ವಿಗ್ರಹಗಳನ್ನು ನೀಡುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ವಂಚಿಸಿರುವುದು ಮತ್ತು ಹಲವರಿಂದ ಹಣ ಪಡೆದು, ವಿಗ್ರಹ ನೀಡದೆ ಇರುವ ಬಗ್ಗೆ ದೂರು ದಾಖಲಾಗಿತ್ತು. ಕುಲ್ತಲಿಯ ಕೆವುರಖಾಲಿ ಗ್ರಾಮದಲ್ಲಿರುವ ಸರ್ದಾರ್‌ ನಿವಾಸದ ಮೇಲೆ ಸೋಮವಾರ ಪೊಲೀಸರು ದಾಳಿ ನಡೆಸಿದ್ದರು. ‘ಸರ್ದಾರ್‌ ಪತ್ತೆಗಾಗಿ ತನಿಖೆ ನಡೆಯುತ್ತಿದ್ದು, ಅವರ ಕುಟುಂಬದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ತನಿಖೆಯ ವೇಳೆ ಸುರಂಗ ಪತ್ತೆಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಸರ್ದಾರ್‌ ಕುಟುಂಬದೊಂದಿಗಿನ ಜಗಳದಲ್ಲಿ ಮೂವರು ಪೊಲೀಸರಿಗೆ ಗಾಯಗಳಾಗಿದ್ದು, ಪೊಲೀಸರು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.