ಛತ್ತೀಸಗಢ | 2 ಐಇಡಿ ವಶಪಡಿಸಿಕೊಂಡ ಭದ್ರತಾ ಪಡೆ: ತಪ್ಪಿದ ಅನಾಹುತ ಕೊಂಡಗಾಂವ್: ಛತ್ತೀಸಗಢದ ಕೊಂಡಗಾಂವ್ ಜಿಲ್ಲೆಯಲ್ಲಿ ನಕ್ಸಲರು ಅಡಗಿಸಿಟ್ಟಿದ್ದ ಎರಡು ಕಚ್ಚಾ ಸ್ಫೋಟಕ ಸಾಧನಗಳನ್ನು (ಐಇಡಿ) ವಶಪಡಿಸಿಕೊಳ್ಳುವ ಮೂಲಕ ಸಂಭವಿಸಬಹುದಾದ ದುರಂತವನ್ನು ಸೇನಾ ಸಿಬ್ಬಂದಿ ತಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇರಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟೊಕೊಡೋ ಮತ್ತು ಕಿಲೆನಾರ್ ಗ್ರಾಮಗಳ ನಡುವೆ ಭದ್ರತಾ ಪಡೆ ಹಾಗೂ ಪೊಲೀಸರನ್ನು ಗುರಿಯಾಗಿಸಿಕೊಂಡು 5 ಕೆ.ಜಿ ತೂಕದ ಕಚ್ಚಾ ಸ್ಫೋಟಕ ಸಾಧನಗಳನ್ನು ಭೂಮಿಯಡಿ ಇರಿಸಲಾಗಿತ್ತು. ಬಾಂಬ್ ನಿಷ್ಕ್ರಿಯ ದಳದಿಂದ ಐಇಡಿಗಳನ್ನು ನಿಷ್ಕ್ರಿಯಗೊಳಿಸಲಾಯಿತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರದ ಪ್ರಕಾರ, 2023ರ ಡಿಸೆಂಬರ್‌ನಿಂದ 2024ರ ಜೂನ್ ನಡುವೆ 273 ನಕ್ಸಲ್ ಸಂಬಂಧಿತ ಪ್ರಕರಣಗಳು ವರದಿಯಾಗಿದೆ. ಇದರಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ 92 ಎನ್‌ಕೌಂಟರ್‌ ಘಟನೆಗಳು ನಡೆದಿವೆ. ನಕ್ಸಲರ ವಿರುದ್ಧ ನಡೆದ ಎನ್‌ಕೌಂಟರ್‌ಗಳಲ್ಲಿ 19 ಮಂದಿ ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದು, 88 ಮಂದಿ ಗಾಯಗೊಂಡಿದ್ದರು. ನಕ್ಸಲರ ದಾಳಿಯಲ್ಲಿ 34 ಮಂದಿ ನಾಗರಿಕರು ಮೃತಪಟ್ಟಿದ್ದರು. 137 ನಕ್ಸಲರನ್ನು ಗುಂಡಿಕ್ಕಿ ಕೊಲ್ಲಲಾಯಿತು ಮತ್ತು 171 ಮಂದಿಯನ್ನು ಬಂಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.