ಬಿಜೆಪಿಯ ತಪ್ಪು ನೀತಿಗಳಿಂದ ಯೋಧರಿಗೆ ಈ ದುಃಸ್ಥಿತಿ: ರಾಹುಲ್‌ ಗಾಂಧಿ ವಾಗ್ದಾಳಿ ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಡೋಡಾದಲ್ಲಿ ನಾಲ್ವರು ಸೈನಿಕರು ಹುತಾತ್ಮರಾದ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ತೀವ್ರ ವಾಗ್ದಾಳಿ ನಡೆಸಿದೆ. ನಿರಂತರ ಭದ್ರತಾ ಲೋಪಗಳಿಗೆ ಕೇಂದ್ರ ಸರ್ಕಾರವೇ ಹೊಣೆ ಹೊರಬೇಕು ಮತ್ತು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆಗ್ರಹಿಸಿದ್ದಾರೆ. ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿ, ಇಂಥ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದು ತೀವ್ರ ದುಃಖ ಮತ್ತು ಆಘಾತವನ್ನು ಉಂಟುಮಾಡಿದೆ ಎಂದು ಹೇಳಿದ್ದಾರೆ. ‘ನಿರಂತರ ಭಯೋತ್ಪಾದಕ ದಾಳಿಗಳು ಜಮ್ಮು ಮತ್ತು ಕಾಶ್ಮೀರದ ಕೆಟ್ಟ ಸ್ಥಿತಿಯನ್ನು ನಮ್ಮು ಮುಂದಿಟ್ಟಿವೆ. ಬಿಜೆಪಿಯ ತಪ್ಪು ನೀತಿಗಳಿಂದಾಗಿ ನಮ್ಮ ಯೋಧರು ಮತ್ತು ಅವರ ಕುಟುಂಬಸ್ಥರು ಈ ದುಃಸ್ಥಿತಿಯನ್ನು ಅನುಭವಿಸುತ್ತಿದ್ದಾರೆ’ ಎಂದು ‘ಎಕ್ಸ್‌’ ಮೂಲಕ ಕಿಡಿಕಾರಿದ್ದಾರೆ. ‘ಇಂಥ ದುಃಖದ ಸಂದರ್ಭದಲ್ಲಿ ಇಡೀ ದೇಶವೇ ಭಯೋತ್ಪಾದನೆ ವಿರುದ್ಧವಾಗಿ ನಿಂತಿದೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.