ಮೈಕ್ರೋಸಾಫ್ಟ್‌ನ ಜಾಗತಿಕ ತಾಂತ್ರಿಕ ಅಡಚಣೆಗೆ ಕಾರಣ ಏನು? ನವದೆಹಲಿ: ಟೆಕ್ ದೈತ್ಯ ಮೈಕ್ರೋಸಾಫ್ಟ್‌ನ ಸೇವೆಗಳಲ್ಲಿ ಉಂಟಾದ ತಾಂತ್ರಿಕ ಅಡಚಣೆಯಿಂದಾಗಿ ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ತೀವ್ರ ಅಡಚಣೆ ಉಂಟಾಗಿದೆ. ಈ ಬಗ್ಗೆ ಮೈಕ್ರೋಸಾಫ್ಟ್‌ ಸ್ಪಷ್ಟನೆ ನೀಡಿದ್ದು ಜಾಗತಿಕ ಅಡಚಣೆಯ ತಾಂತ್ರಿಕ ದೋಷಗಳನ್ನು ನಿವಾರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಗ್ರಾಹಕ ಸೇವೆಗಳು ಶೀಘ್ರವೇ ಚೇತರಿಕೆ ಕಾಣಲಿವೆ ಎಂದು ತಿಳಿಸಿದೆ. ‘ಆಂತರಿಕವಾಗಿ ಥರ್ಡ್ ಪಾರ್ಟಿ ಸಾಫ್ಟ್‌ವೇರ್‌ಗಳ ಅಪ್‌ಡೇಟ್ ಪ್ರಕ್ರಿಯೆಯಲ್ಲಿ ಆದಂತಹ ತಾಂತ್ರಿಕ ಅಡಚಣೆ ನಮ್ಮ ವಿಂಡೋಸ್ ಸಾಫ್ಟ್‌ವೇರ್ ವ್ಯವಸ್ಥೆ ಮೇಲೆ ಪರಿಣಾಮ ಬೀರಿರುವುದನ್ನು ಕಂಡುಕೊಂಡಿದ್ದೇವೆ. ಇದನ್ನು ಆದಷ್ಟು ಬೇಗ ಪರಿಹರಿಸಲು ನಮ್ಮ ತಂಡ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ’ ಎಂದು ಮೈಕ್ರೋಸಾಫ್ಟ್‌ ವಕ್ತಾರರು ತಿಳಿಸಿದ್ದಾರೆ. ಮುಖ್ಯವಾಗಿ ವಿಮಾನಯಾನ ಸೇವೆಗಳ ಮೇಲೆ ಈ ಅಡಚಣೆ ಕೆಟ್ಟ ಪರಿಣಾಮ ಉಂಟು ಮಾಡಿದೆ. ಭಾರತದಲ್ಲಿ ಎಸ್‌ಬಿಐ ಸೇರಿದಂತೆ ಕೆಲ ಬ್ಯಾಂಕುಗಳು ತಮ್ಮ ಮೇಲೆ ಮೈಕ್ರೋಸಾಫ್ಟ್‌ ಅಡಚಣೆ ಪರಿಣಾಮ ಬೀರಿಲ್ಲ ಎಂದು ತಿಳಿಸಿವೆ. ಭಾರತದ ಷೇರುಮಾರುಕಟ್ಟೆಗಳೂ ನಮ್ಮ ಮೇಲೆ ಪರಿಣಾಮ ಬೀರಿಲ್ಲ ಎಂದು ತಿಳಿಸಿವೆ. ವಿಮಾನಯಾನ ಸೇವೆಗಳ ಮೇಲೆ ಹೆಚ್ಚು ದುಷ್ಪರಿಣಾಮ ಬೀರಿದೆ. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ವಿಮಾನ ಹಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಸ್ಪೈಸ್ ಜೆಟ್, ಆಕಾಶ ಏರ್ ಲೈನ್ಸ್ ಸಂಸ್ಥೆಗಳು ಮೈಕ್ರೋಸಾಫ್ಟ್ ಸಾಫ್ಟ್‌ವೇರ್‌ನಲ್ಲಿ ಕಾಣಿಸಿಕೊಂಡಿರುವ ದೋಷದಿಂದಾಗಿ ತಮ್ಮ ಸಂಸ್ಥೆಯ ಅನೇಕ ವಿಮಾನಗಳ ಹಾರಾಟ ನಿಲ್ಲಿಸಿವೆ. ಅಮೆರಿಕದ ಪ್ರಮುಖ ವಿಮಾನ ಸೇವೆಗಳಾದ, ಡೆಲ್ಟಾ ಏರ್ ಲೈನ್ಸ್, ಯುಎಸ್ ಏರ್ ಲೈನ್ಸ್ ವಿಮಾನಗಳ ಸೇವೆಯನ್ನು ತಡೆಹಿಡಿಯಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.