ದೇಶದ ಹಲವು ಭಾಗಗಳಲ್ಲಿ ಉತ್ತಮ ಮಳೆ: ಭತ್ತ ನಾಟಿ ಚುರುಕು ನವದೆಹಲಿ : ದೇಶದ ಹಲವು ಭಾಗಗಳಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಮುಂಗಾರು ಹಂಗಾಮಿನಲ್ಲಿ 410 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ನಾಟಿ ಗುರಿ ಹೊಂದಲಾಗಿದೆ. ಇಲ್ಲಿಯವರೆಗೆ 166.06 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ನಾಟಿ ಪೂರ್ಣಗೊಂಡಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ. ಭತ್ತವು ಮುಂಗಾರು ಋತುವಿನ ಪ್ರಮುಖ ಬೆಳೆಯಾಗಿದೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಪಂಜಾಬ್‌, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಒಟ್ಟು 155.65 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ನಾಟಿ ಮಾಡಲಾಗಿತ್ತು ಎಂದು ಹೇಳಿದೆ. ಆಹಾರೇತರ ಬೆಳೆ: ಈ ಬಾರಿ ಆಹಾರೇತರ ಬೆಳೆಗಳ ಬಿತ್ತನೆ ಪ್ರದೇಶದಲ್ಲಿ ಏರಿಕೆಯಾಗಿದೆ. ಅತಿಹೆಚ್ಚು ಪ್ರದೇಶದಲ್ಲಿ ಎಣ್ಣೆಕಾಳುಗಳ ಬಿತ್ತನೆಯಾಗಿದೆ. ಕಳೆದ ವರ್ಷ ಇಲ್ಲಿಯವರೆಗೆ 150.91 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಎಣ್ಣೆಕಾಳುಗಳ ಬಿತ್ತನೆಯಾಗಿತ್ತು. ಈ ವರ್ಷ 163.11 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಈ ಪೈಕಿ ಸೋಯಾಬಿನ್‌ ಬಿತ್ತನೆ ಪ್ರದೇಶದಲ್ಲಿ ಏರಿಕೆಯಾಗಿದ್ದು, ಒಟ್ಟು 119.04 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಭಾರತವು ವಿಶ್ವದಲ್ಲಿಯೇ ಅತಿಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಉತ್ಪಾದಿಸುವ ರಾಷ್ಟ್ರಗಳ ಪೈಕಿ ಒಂದಾಗಿದೆ. ಜಾಗತಿಕ ಮಟ್ಟದಲ್ಲಿ ಶೇ 23ರಷ್ಟು ಉತ್ಪಾದನಾ ಪಾಲು ಹೊಂದಿದೆ. ಪ್ರಮುಖವಾಗಿ ಅಮೆರಿಕ, ಬಾಂಗ್ಲಾದೇಶ, ಚೀನಾ, ಶ್ರೀಲಂಕಾ ಹಾಗೂ ಯುಎಇಗೆ ಹತ್ತಿ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಆದರೆ, ಈ ಬಾರಿ ಹತ್ತಿ ಬಿತ್ತನೆ ಇಳಿಕೆಯಾಗಿದೆ. ಹಿಂದಿನ ವರ್ಷ 105.66 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಈ ಬಾರಿ 102.05 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಜುಲೈ 19ರ ವರೆಗೆ ದೇಶದಲ್ಲಿ ಮುಂಗಾರು ಹಂಗಾಮಿನಡಿ 704.04 ಲಕ್ಷ ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 680.36 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿತ್ತು. ಅಧಿಕ ಇಳುವರಿ ನಿರೀಕ್ಷೆ ಪ್ರತಿವರ್ಷ ಭಾರತವು ದೇಶೀಯ ಬೇಡಿಕೆಗೆ ಅನುಗುಣವಾಗಿ ವಿದೇಶಗಳಿಂದ ಖಾದ್ಯ ತೈಲ ಮತ್ತು ಬೇಳೆಕಾಳುಗಳನ್ನು ಆಮದು ಮಾಡಿಕೊಳ್ಳುತ್ತದೆ. ಇಂಡೊನೇಷ್ಯಾ ಹಾಗೂ ಮಲೇಷ್ಯಾದಿಂದ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. ಅರ್ಜೆಂಟೀನಾದಿಂದ ಸೋಯಾಬಿನ್‌, ರಷ್ಯಾ ಮತ್ತು ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆಯು ಪೂರೈಕೆಯಾಗುತ್ತದೆ. ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಛತ್ತೀಸಗಢ ಮತ್ತು ಆಂಧ್ರಪ್ರದೇಶದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ತೊಗರಿ ಬೆಳೆಯಲಾಗುತ್ತದೆ. ಭಾರತವು ಆಮದು ಮಾಡಿಕೊಳ್ಳುವ ತೊಗರಿ ಬೇಳೆಯಲ್ಲಿ ಶೇ 50ರಷ್ಟು ಮೊಜಾಂಬಿಕ್‌ನಿಂದ ಬರುತ್ತದೆ. ‘ಈ ಮುಂಗಾರಿನಲ್ಲಿ ದೇಶದ ವ್ಯಾಪ್ತಿ ಬೇಳೆಕಾಳು ಮತ್ತು ಎಣ್ಣೆಕಾಳುಗಳ ಬಿತ್ತನೆ ಪ್ರದೇಶದಲ್ಲಿ ಏರಿಕೆಯಾಗಿದೆ. ಕೊಯ್ಲಿನವರೆಗೂ ಇದೇ ಹವಾಮಾನ ಪರಿಸ್ಥಿತಿ ಮುಂದುವರಿದರೆ ಉತ್ತಮ ಇಳುವರಿ ಬರುವ ನಿರೀಕ್ಷೆಯಿದೆ’ ಎಂದು ಕೃಷಿ ತಜ್ಞರು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.