<.... (="0a3e239a54e658d4ec5f01f7116396d2", =".CA8E4F893CD029437B2A7F0DFF543F00..52255889211438BCD864B0DB271A7554..54541")> ಕೋಲ್ಕತ್ತ: ‘ನಬನ್ನಾ ಅಭಿಯಾನ್’ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರನ್ನು ಗುರಿಯಾಗಿಸಿಕೊಂಡು ಪೊಲೀಸರು ಕೈಗೊಂಡ ಕ್ರಮ ಖಂಡಿಸಿ ಬಿಜೆಪಿ ಕರೆ ನೀಡಿದ್ದ 12 ತಾಸುಗಳ ಪಶ್ಚಿಮ ಬಂಗಾಳ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಅಲ್ಲದೆ, ರಾಜ್ಯದ ಅಲ್ಲಲ್ಲಿ ಹಿಂಸಾಚಾರ ನಡೆದಿದೆ. : 4.86% . . . . ಬಂದ್‌ ಕರೆಯನ್ನು ಯಶಸ್ವಿಗೊಳಿಸಲು ಬಿಜೆಪಿ ಕಾರ್ಯಕರ್ತರು ಬುಧವಾರ ಮುಂದಾದಾಗ ರಾಜ್ಯದ ಹಲವೆಡೆ ಪೊಲೀಸರ ಜೊತೆ ಸಂಘರ್ಷ ಉಂಟಾಯಿತು. ಬಿಜೆಪಿ ಕಾರ್ಯಕರ್ತರು ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆಯೂ ಅಲ್ಲಲ್ಲಿ ಸಂಘರ್ಷ ಉಂಟಾಯಿತು. ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಬಿಜೆಪಿಯ ಮುಖಂಡರಾದ ರೂಪಾ ಗಂಗೂಲಿ, ಸಮಿಕ್ ಭಟ್ಟಾಚಾರ್ಯ, ಅಗ್ನಿಮಿತ್ರ ಪಾಲ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು. ಬಂದ್‌ ಕರೆಯು ಜನಜೀವನದ ಮೇಲೆ ಭಾಗಶಃ ಪರಿಣಾಮ ಉಂಟುಮಾಡಿತು. ರಸ್ತೆಗಿಳಿದರೆ ಸಮಸ್ಯೆ ಎದುರಾಗಬಹುದು ಎಂಬ ಭೀತಿಯಿಂದ ಹಲವರು ಮನೆಯಿಂದ ಹೊರಬರಲಿಲ್ಲ. ರಾಜ್ಯ ರಾಜಧಾನಿ ಕೋಲ್ಕತ್ತದಲ್ಲಿ ಎಂದಿನ ದಟ್ಟಣೆ ಇರಲಿಲ್ಲ. ಬಸ್ಸು, ಆಟೊರಿಕ್ಷಾ ಮತ್ತು ಟ್ಯಾಕ್ಸಿಗಳು ಕಡಿಮೆ ಸಂಖ್ಯೆಯಲ್ಲಿ ಸಂಚರಿಸಿದವು. ಖಾಸಗಿ ವಾಹನಗಳ ಸಂಚಾರ ಕೂಡ ಕಡಿಮೆ ಇತ್ತು. ಆದರೆ ಮಾರುಕಟ್ಟೆಗಳು, ಅಂಗಡಿಗಳು ತೆರೆದಿದ್ದವು. ಶಾಲೆ ಹಾಗೂ ಕಾಲೇಜುಗಳು ತೆರೆದಿದ್ದರೂ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇತ್ತು. ಕೋಲ್ಕತ್ತದ ಹಲವು ಇಂಗ್ಲಿಷ್ ಮಾಧ್ಯಮ ಶಾಲೆಗಳು ತರಗತಿ ನಡೆಸಲಿಲ್ಲ. ಖಾಸಗಿ ಕಚೇರಿಗಳಲ್ಲಿ ಹಾಜರಾತಿ ಕಡಿಮೆ ಇತ್ತು. ಅಲ್ಲಿನ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿತ್ತು. ಆದರೆ ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿಯು ಎಂದಿನಂತೆಯೇ ಇತ್ತು. ಬಂದ್‌ ಮಾಡಿಸಲು ಯತ್ನಿಸುತ್ತಿದ್ದ ಬಿಜೆಪಿಯ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಬಂದರುಗಳಲ್ಲಿ ಕಾರ್ಯಾಚರಣೆಯು ಸಹಜವಾಗಿತ್ತು. ಐ.ಟಿ. ವಲಯದ ಮೇಲೆ ಹಾಗೂ ಪ್ರಮುಖ ಕೈಗಾರಿಕೆಗಳ ಮೇಲೆ ಬಂದ್‌ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಮೂಲಗಳು ಹೇಳಿವೆ. * ಮೆರವಣಿಗೆ ನಡೆಸಿದ ಬಿಜೆಪಿಯ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ಸುಕಾಂತ ಮಜುಮ್ದಾರ್ * ಬಂದ್‌ ಮಾಡುವಂತೆ ಒತ್ತಾಯಿಸುತ್ತಿದ್ದ ಕಾರಣಕ್ಕೆ ಬಿಜೆಪಿ ಸಂಸದ ಮನೋಜ್ ತಿಗ್ಗಾ ಬಂಧನ * 49 ಕಡೆಗಳಲ್ಲಿ ರೈಲು ಸಂಚಾರಕ್ಕೆ ಅಡ್ಡಿ * ಕೂಚ್ ಬಿಹಾರ್, ಆಲಿಪುರದ್ವಾರ್, ಸಿಲಿಗುರಿ, ಪುರುಲಿಯಾ, ಬಂಕುರಾ ಮತ್ತು ಮಾಲ್ಡಾದಲ್ಲಿ ಬಿಜೆಪಿ ಪ್ರತಿಭಟನೆಯ ಕಾರಣದಿಂದಾಗಿ ಸಾರ್ವಜನಿಕ ಸಾರಿಗೆ ವಾಹನಗಳ ಸಂಚಾರಕ್ಕೆ ತೊಂದರೆ * ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರಿಂದ ನಂದಿಗ್ರಾಮದಲ್ಲಿ ಪ್ರತಿಭಟನಾ ಮೆರವಣಿಗೆ * ಬಂದ್‌ಗೆ ಬೆಂಬಲ ನೀಡಿದ್ದವರು ಪ್ರಮುಖ ತಂತಿಗಳ ಮೇಲೆ ಬಾಳೆ ಎಲೆ ಎಸೆದ ಕಾರಣ, ಉಪನಗರ ರೈಲು ಸಂಚಾರಕ್ಕೆ ಅಡ್ಡಿ ಬಿಜೆಪಿ ಆರೋಪ ಉತ್ತರ 24 ಪರಗಣ ಜಿಲ್ಲೆಯಲ್ಲಿ ಟಿಎಂಸಿ ಗೂಂಡಾಗಳು ಸ್ಥಳೀಯ ಬಿಜೆಪಿ ಮುಖಂಡ ಪ್ರಿಯಾಂಗು ಪಾಂಡೆ ಅವರ ಕಾರಿನ ಮೇಲೆ ಹಲವು ಸುತ್ತು ಗುಂಡು ಹಾರಿಸಿದರು ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಸಂಬಂಧಿಸಿದ್ದು ಎನ್ನಲಾದ ವಿಡಿಯೊ ಒಂದನ್ನು ಅದು ಹಂಚಿಕೊಂಡಿದೆ. ಕಾರಿನ ಚಾಲಕ ಹಾಗೂ ಪಕ್ಷದ ಕಾರ್ಯಕರ್ತರೊಬ್ಬರಿಗೆ ತಲೆಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. ಆದರೆ ಈ ಇಬ್ಬರನ್ನು ಯಾರೋ ಹೊಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ‘ಟಿಎಂಸಿ ನಿಷ್ಠ ದುಷ್ಕರ್ಮಿಗಳು ಗುಂಡು ಹಾರಿಸಿದರು. ಪೊಲೀಸರು ನಮ್ಮ ಸುತ್ತ ಇಲ್ಲದಿದ್ದರೆ ಜನರ ಶಕ್ತಿ ಹೇಗಿರುತ್ತದೆ ಎಂಬುದನ್ನು ನಾವು ಟಿಎಂಸಿಗೆ ತೋರಿಸುತ್ತೇವೆ’ ಎಂದು ಬಿಜೆಪಿ ಮುಖಂಡ ಅರ್ಜುನ್ ಸಿಂಗ್ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.