<.... (="0a3e239a54e658d4ec5f01f7116396d2", =".CA8E4F893CD029437B2A7F0DFF543F00..5D5045B24B64E36F42B06335E5488F41..52468")> ನವದೆಹಲಿ: ಆರೋಗ್ಯಸೇವೆ ಒದಗಿಸುವ ವೃತ್ತಿನಿರತರ ಸುರಕ್ಷೆಗಾಗಿ ಆಸ್ಪತ್ರೆ ಆವರಣಗಳಲ್ಲಿ ರಾತ್ರಿ ಹೊತ್ತು ಪಾಳಿಯಲ್ಲಿ ಗಸ್ತು ತಿರುಗಬೇಕು ಮತ್ತು ಪ್ರಮುಖ ಸ್ಥಳಗಳಿಗೆ ಜನರು ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ. : 3.39% . . . . ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರ, ವೈದ್ಯ ಸಿಬ್ಬಂದಿ ಸುರಕ್ಷತೆಗೆ ತುರ್ತು ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್‌ ಆದೇಶ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಸಲಹೆಗಳನ್ನು ನೀಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿಯು, ರಾಜ್ಯಗಳ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್‌ ಮಹಾ ನಿರ್ದೇಶಕರ (ಡಿಜಿಪಿ) ಜೊತೆ ಮಾತುಕತೆ ನಡೆಸಬೇಕು. ಈ ಪ್ರಕ್ರಿಯೆಯು ಒಂದು ವಾರದಲ್ಲಿ ಪೂರ್ಣಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು. ಈ ಬೆನ್ನಲ್ಲೇ ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು, ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಡಿಜಿಪಿ ಅವರಿಗೆ ಪತ್ರ ಬರೆದಿದ್ದಾರೆ. ವೈದ್ಯ ಸಿಬ್ಬಂದಿ ಸುರಕ್ಷೆಗೆ ಕೈಗೊಳ್ಳಬಹುದಾದ ಅಗತ್ಯ ತುರ್ತು ಕ್ರಮಗಳ ಬಗ್ಗೆ ಪತ್ರದಲ್ಲಿ ಸಲಹೆ ನೀಡಿದ್ದಾರೆ. ಕೇಂದ್ರದ ಇತರ ಸಲಹೆಗಳು * ವೈದ್ಯ ಸಿಬ್ಬಂದಿ ಸುರಕ್ಷೆ ಕುರಿತ ರಾಜ್ಯದ ಕಾನೂನುಗಳು ಹಾಗೂ ಕಾನೂನು ಉಲ್ಲಂಘನೆಗೆ ಇರುವ ಶಿಕ್ಷೆ ಮತ್ತು ದಂಡದ ಕುರಿತ ವಿವರವನ್ನು ಆಸ್ಪತ್ರೆಯ ಆವರಣದಲ್ಲಿ ಎದ್ದು ಕಾಣುವಂತೆ ಇಂಗ್ಲಿಷ್‌ ಮತ್ತು ಸ್ಥಳೀಯ ಭಾಷೆಗಳಲ್ಲಿ ಪ್ರದರ್ಶಿಸಬೇಕು *ಹಿರಿಯ ವೈದ್ಯರು, ಆಡಳಿತಾಧಿಕಾರಿಗಳನ್ನು ಒಳಗೊಂಡ ಆಸ್ಪತ್ರೆ ಸುರಕ್ಷತೆ ಸಮಿತಿ ಮತ್ತು ಹಿಂಸಾಚಾರ ತಡೆ ಸಮಿತಿ ರಚಿಸಬೇಕು *ಜನರು ಮತ್ತು ರೋಗಿಗಳ ಸಂಬಂಧಿಕರಿಗೆ ಆಸ್ಪತ್ರೆಯ ಪ್ರಮುಖ ಸ್ಥಳಗಳಿಗೆ ಪ್ರವೇಶ ಕಲ್ಪಿಸಬೇಕು * ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಮತ್ತು ನರ್ಸ್‌ಗಳ ಸುರಕ್ಷೆ ದೃಷ್ಟಿಯಿಂದ ಆಸ್ಪತ್ರೆಯ ಎಲ್ಲ ಪ್ರದೇಶಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಇರಬೇಕು *ಆಸ್ಪತ್ರೆಯಲ್ಲಿ 24/7 ಭದ್ರತಾ ಕಂಟ್ರೋಲ್ ರೂಮ್‌ ಸ್ಥಾಪಿಸಬೇಕು * ಲೈಂಗಿಕ ಕಿರುಕುಳ ಕುರಿತ ಆಂತರಿಕ ಸಮಿತಿ ರಚಿಸಬೇಕು * ಸಿ.ಸಿ.ಟಿ.ವಿ ಕ್ಯಾಮೆರಾಗಳ ಸ್ಥಿತಿಗತಿಯ ಪರಿಶೀಲನೆ ನಡೆಸಬೇಕು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.