<.... (="0a3e239a54e658d4ec5f01f7116396d2", =".CA8E4F893CD029437B2A7F0DFF543F00..77A1608E7359987A25E497F16610EC7E..43738")> ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದುಬಿದ್ದ ಪ್ರಕರಣ ಸಂಬಂಧ, ಪ್ರತಿಮೆಯ ವಿನ್ಯಾಸಗಾರ ಚೇತನ್‌ ಪಾಟೀಲ್‌ ಅವರನ್ನು ಕೊಲ್ಹಾಪುರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. : 3.98% . . . . ಪಾಟೀಲ್ ಅವರನ್ನು ಗುರುವಾರ ತಡರಾತ್ರಿ ವಶಕ್ಕೆ ಪಡೆದು ಹೆಚ್ಚಿನ ತನಿಖೆಗಾಗಿ ಸಿಂಧುದುರ್ಗ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಕೊಲ್ಹಾಪುರ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಪಂಡಿತ್ ತಿಳಿಸಿದ್ದಾರೆ. ಶಿವಾಜಿ ಪ್ರತಿಮೆ ಕುಸಿದುಬಿದ್ದ ಘಟನೆ ಸಂಬಂಧ, ಪ್ರತಿಮೆ ನಿರ್ಮಾಣದ ಗುತ್ತಿಗೆದಾರ ಹಾಗೂ ವಿನ್ಯಾಸಗಾರನ ವಿರುದ್ಧ ಮಂಗಳವಾರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪ್ರತಿಮೆ ನಿರ್ಮಾಣದ ಗುತ್ತಿಗೆದಾರ, ವಿನ್ಯಾಸಕ ಹಾಗೂ ಕಲಾವಿದರೇ ಈ ದುರ್ಘಟನೆಗೆ ಕಾರಣ ಎಂದು ಆರೋಪಿಸಿ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ ಒಬ್ಬರು ಮಾಲ್ವನ್‌ ಠಾಣೆಗೆ ಈ ಸಂಬಂಧ ಸೋಮವಾರ ದೂರು ನೀಡಿದ್ದರು. ದೂರನ್ನು ಆಧರಿಸಿ ಗುತ್ತಿಗೆದಾರ ಜಯದೀಪ್‌ ಆಪ್ಟೆ ಹಾಗೂ ಪ್ರತಿಮೆಯ ವಿನ್ಯಾಸಗಾರ ಚೇತನ್‌ ಪಾಟೀಲ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಶಿವಾಜಿ ಮಹಾರಾಜರ 35 ಅಡಿ ಎತ್ತರದ ಈ ಪ್ರತಿಮೆಯನ್ನು 2023ರ ಡಿಸೆಂಬರ್‌ 4ರಂದು (ನೌಕಾ ದಿನ) ಅನಾವರಣಗೊಳಿಸಿದ್ದರು. ಆಗಸ್ಟ್‌ 26ರಂದು (ಸೋಮವಾರ) ಪ್ರತಿಮೆ ಕುಸಿದಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂದೆ ನೇತೃತ್ವದ ಸರ್ಕಾರವನ್ನು ವಿಪಕ್ಷಗಳು ಟೀಕಿಸಿದ್ದವು. ನೌಕಾಪಡೆಯು ಈ ಪ್ರತಿಮೆಯನ್ನು ನಿರ್ಮಿಸಿದ್ದಾಗಿ ಮುಖ್ಯಮಂತ್ರಿ ಶಿಂಧೆ ಪ್ರತಿಕ್ರಿಯಿಸಿದ್ದರು. ‘ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಅಯೋಧ್ಯೆಯ ರಾಮಮಂದಿರ, ನೂತನ ಸಂಸತ್‌, ಸಮೃದ್ಧಿ ಕಾರಿಡಾರ್‌, ಅಟಲ್ ಸೇತುವೆ ಇತ್ತಿತರ ಕಟ್ಟಡಗಳಲ್ಲೂ ಸಮಸ್ಯೆ ಕಂಡುಬಂದಿದೆ’ ಎಂದು ಮಹಾ ವಿಕಾಸ ಆಘಾಡಿಯು ವಾಗ್ದಾಳಿ ನಡೆಸಿದೆ. ‘ಪ್ರತಿಮೆ ನಿರ್ಮಾಣಕ್ಕೆ ₹2.36 ಕೋಟಿ ವ್ಯಯಿಸಲಾಗಿದೆ. ಅನುಭವವೇ ಇಲ್ಲದ ಶಿಲ್ಪಿ ಜಯದೀಪ್‌ ಆಪ್ಟೆ ಅವರಿಗೆ ನಿರ್ಮಾಣದ ಹೊಣೆ ನೀಡಲಾಗಿತ್ತು’ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಆರೋಪಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.