‘ವಿಶ್ವ ಪಾರಂಪರಿಕ ತಾಣ’ದ ಪಟ್ಟಿಗೆ ನೆಲ್ಸನ್‌ ಮಂಡೇಲಾಗೆ ಸಂಬಂಧಿಸಿದ ಸ್ಥಳಗಳು ನವದೆಹಲಿ: ದಕ್ಷಿಣ ಆಫ್ರಿಕಾದ ವಿಮೋಚನಾ ಹೋರಾಟ ಮತ್ತು ಮಾನವ ಹಕ್ಕುಗಳ ಪ್ರತಿಪಾದಕ ನೆಲ್ಸನ್‌ ಮಂಡೇಲಾ ಅವರಿಗೆ ಸಂಬಂಧಿಸಿದ ಐತಿಹಾಸಿಕ ಸ್ಥಳಗಳನ್ನು ‘ಯುನೆಸ್ಕೊ– ವಿಶ್ವ ಪಾರಂಪರಿಕ ತಾಣ’ದ ಪಟ್ಟಿಗೆ ಸೇರಿಸಲಾಗಿದೆ. ಇಲ್ಲಿ ನಡೆದ, ಭಾರತ ಆಯೋಜಿಸಿದ್ದ 46ನೇ ವಿಶ್ವ ಪಾರಂಪರಿಕ ಸಮಿತಿ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು. ಈ ಘೋಷಣೆ ಹೊರಬೀಳುತ್ತಲೇ ದಕ್ಷಿಣ ಆಫ್ರಿಕಾ ನಿಯೋಗ ಸಂಭ್ರಮಿಸಿತು. ‘ಮಾನವ ಹಕ್ಕುಗಳು, ವಿಮೋಚನೆಗಾಗಿ ಹೋರಾಟ ಮತ್ತು ಸಾಮರಸ್ಯ: ನೆಲ್ಸನ್‌ ಮಂಡೇಲಾ ಅವರ ಪಿತ್ರಾರ್ಜಿತ ಸ್ಥಳ’ ಎಂಬ ಹೆಸರಿನ ನಾಮನಿರ್ದೇಶನವನ್ನು ದಕ್ಷಿಣ ಆಫ್ರಿಕಾ ಮಾಡಿತ್ತು. ಇತರ ಸದಸ್ಯ ದೇಶಗಳಾದ ಇಟಲಿ, ದಕ್ಷಿಣ ಕೊರಿಯ, ಸೇಂಟ್‌ ವಿನ್ಸೆಂಟ್‌ ಮತ್ತು ಗ್ರೆನೇಡಿನೆಸ್‌, ಜಪಾನ್‌ ಮತ್ತು ಇಟಲಿ ಈ ನಾಮನಿರ್ದೇಶನವನ್ನು ಬೆಂಬಲಿಸಿದವು. ಮಾನವಕುಲದ ದೃಷ್ಟಿಯಿಂದ ಈ ಸ್ಥಳಗಳು ಮಹತ್ವ ಪಡೆದಿವೆ ಎಂದು ಜಪಾನ್‌ ನಿಯೋಗ ಹೇಳಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.