ನೀಟ್‌–ಯುಜಿ: ಆಗಸ್ಟ್‌ 14ರಿಂದ ಕೌನ್ಸೆಲಿಂಗ್‌ ನವದೆಹಲಿ: ಪ್ರಸಕ್ತ ಸಾಲಿನ ‘ನೀಟ್‌–ಯುಜಿ’ ಕೌನ್ಸೆಲಿಂಗ್‌ ಆಗಸ್ಟ್‌ 14ರಿಂದ ಆರಂಭವಾಗಲಿದೆ ಎಂದು ವೈದ್ಯಕೀಯ ಕೌನ್ಸೆಲಿಂಗ್‌ ಸಮಿತಿ (ಎಂಸಿಸಿ) ಸೋಮವಾರ ತಿಳಿಸಿದೆ. ಕೌನ್ಸೆಲಿಂಗ್‌ಗೆ ನೋಂದಣಿ ಪ್ರಕ್ರಿಯೆ ಆಗಸ್ಟ್‌ ಮೊದಲ ವಾರದಿಂದಲೇ ಆರಂಭವಾಗಲಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಕಾರ್ಯದರ್ಶಿ ಡಾ. ಬಿ. ಶ್ರೀನಿವಾಸ ತಿಳಿಸಿದ್ದಾರೆ. ‘ದೇಶದ 710 ವೈದ್ಯಕೀಯ ಕಾಲೇಜುಗಳಲ್ಲಿನ 1.10 ಲಕ್ಷ ಎಂಬಿಬಿಎಸ್‌ ಮತ್ತು ಆಯುಷ್‌, ನರ್ಸಿಂಗ್‌ ಅಲ್ಲದೆ 21,000 ಬಿಡಿಎಸ್‌ ಸೀಟುಗಳಿಗೆ ಕೌನ್ಸೆಲಿಂಗ್‌ ನಡೆಯಲಿದೆ ಎಂದು’ ಅವರು ತಿಳಿಸಿದ್ದಾರೆ. ಅಖಿಲ ಭಾರತ ಕೋಟಾದಡಿಯ ಶೇ 15ರಷ್ಟು ಸೀಟುಗಳಿಗೆ, ಎಲ್ಲ ಏಮ್ಸ್‌, ಪಾಂಡಿಚೇರಿಯ ಜೆಐಪಿಎಂಇಆರ್‌, ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳ ಶೇ 100ರಷ್ಟು ಸೀಟುಗಳಿಗೆ ಎಂಸಿಸಿ ಕೌನ್ಸೆಲಿಂಗ್‌ ನಡೆಸಲಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ‘ನೀಟ್‌–ಯುಜಿ’ಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಕೌನ್ಸೆಲಿಂಗ್‌ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಎಂಸಿಸಿ ವೆಬ್‌ಸೈಟ್‌ ಅನ್ನು ಗಮನಿಸುವಂತೆ ಎಂಸಿಸಿ ಅಭ್ಯರ್ಥಿಗಳಿಗೆ ಸಲಹೆ ನೀಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.