ಕಾಶ್ಮೀರ: ಗುಜರಿ ಅಂಗಡಿಯಲ್ಲಿ ಸ್ಪೋಟ, ನಾಲ್ವರು ಸಾವು ಶ್ರೀನಗರ: ಕಾಶ್ಮೀರ ಉತ್ತರ ಭಾಗದ ಸೋಪೋರ್‌ ನಗರದಲ್ಲಿನ ಗುಜರಿ ಅಂಗಡಿಯೊಂದರಲ್ಲಿ ಸೋಮವಾರ ಸ್ಫೋಟ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಲಡಾಖ್‌ನಿಂದ ಬಂದಿದ್ದ ಟ್ರಕ್‌ನಿಂದ ಗುಜರಿ ವಸ್ತುಗಳನ್ನು ಇಳಿಸುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಮತ್ತೊಬ್ಬ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರನ್ನು ನಜೀರ್‌ ಅಹಮದ್‌ ನಡ್ರೊ(40), ಅಝೀಮ್‌ ಆಶ್ರಫ್‌ ಮಿರ್‌ (20), ಆದಿಲ್‌ ರಶೀದ್‌ ಭಟ್‌ (23) ಮತ್ತು ಮಹಮದ್‌ ಅಝಾರ್‌ (25) ಎಂದು ಗುರುತಿಸಲಾಗಿದೆ. ಘಟನೆಯ ಸ್ವರೂಪ ಮತ್ತು ಸ್ಫೋಟಕ್ಕೆ ಕಾರಣವಾದ ಆಂಶಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸ್ದಳೀಯರಿಗೆ ಸುರಕ್ಷಿತವಾಗಿರುವಂತೆ ಸೂಚಿಸಿದ್ದಾರೆ. ಅವಘಡ ಸಂಭವಿಸಿರುವ ಶೈರ್‌ ಕಾಲೋನಿಯಲ್ಲಿ ಬಹುತೇಕರು ಗುಜರಿ ವ್ಯಾಪಾರವನ್ನು ನಡೆಸುತ್ತಿದ್ದು, ಇದೀಗ ಸ್ಥಳೀಯ ಜನರಲ್ಲಿ ಆತಂಕ ಉಂಟಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.