ದೆಹಲಿ | ಕೋಚಿಂಗ್‌ ಸೆಂಟರ್‌ಗಳಿಗೆ ಹೊಸ ಕಾನೂನು ಜಾರಿ: ಸಚಿವೆ ಆತಿಶಿ ನವದೆಹಲಿ: ದೆಹಲಿಯ ಓಲ್ಡ್‌ ರಾಜೇಂದ್ರ ನಗರದ ಕೋಚಿಂಗ್‌ ಸೆಂಟರ್‌ನ ನೆಲಮಹಡಿಗೆ ಮಳೆ ನೀರು ನುಗ್ಗಿ ಮೂವರು ಐಎಎಸ್‌ ಆಕಾಂಕ್ಷಿಗಳು ಮೃತಪಟ್ಟ ಬೆನ್ನಲ್ಲೇ ದೆಹಲಿ ಸರ್ಕಾರವು ಕೋಚಿಂಗ್‌ ಸೆಂಟರ್‌ಗಳಿಗೆ ಹೊಸ ಕಾನೂನನ್ನು ಜಾರಿಗೊಳಿಸಲಿದೆ ಎಂದು ಸಚಿವೆ ಆತಿಶಿ ಬುಧವಾರ ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋಚಿಂಗ್‌ ಸೆಂಟರ್‌ಗಳ ನಿರ್ವಹಣೆಗೆ ಹೊಸ ಕಾನೂನು ರೂಪಿಸಲು ಸರ್ಕಾರವು ಸರ್ಕಾರಿ ಅಧಿಕಾರಿಗಳು ವಿವಿಧ ಕೋಚಿಂಗ್‌ ಸೆಂಟರ್‌ಗಳ ವಿದ್ಯಾರ್ಥಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ. ಈ ಹೊಸ ನಿಯಮದಡಿ ಕೋಚಿಂಗ್‌ ಸೆಂಟರ್‌ಗಳ ಮೂಲ ಸೌಕರ್ಯ, ಶಿಕ್ಷಕರ ಅರ್ಹತೆ , ಶುಲ್ಕ ನಿಯಂತ್ರಣ ಹಾಗೂ ತಪ್ಪು ಮಾಹಿತಿ ನೀಡುವ ಜಾಹೀರಾತು ಸೇರಿದಂತೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುವುದು ಎಂದು ಆತಿಶಿ ತಿಳಿಸಿದ್ದಾರೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಕಾನೂನುಗಳನ್ನು ಉಲ್ಲಂಘಿಸಿ ನೆಲಮಹಡಿ ಯನ್ನು ಬಳಸುವ ಕೋಚಿಂಗ್ ಸೆಂಟರ್‌ಗಳ ಮೇಲೆ ಈಗಾಗಲೇ ಕಠಿಣ ಕ್ರಮ ಕೈಗೊಂಡಿದೆ. ದೆಹಲಿಯ ಓಲ್ಡ್‌ ರಾಜೇಂದ್ರ ನಗರ, ಮುಖರ್ಜಿ ನಗರ, ಲಕ್ಷ್ಮಿ ನಗರ ಮತ್ತು ಪ್ರೀತ್ ವಿಹಾರ್‌ನಲ್ಲಿರುವ 30 ಕೋಚಿಂಗ್ ಸೆಂಟರ್‌ಗಳ ನೆಲಮಹಡಿಗಳಿಗೆ ಬೀಗ ಜಾಡಿದಿದೆ ಹಾಗೂ 200ಕ್ಕೂ ಹೆಚ್ಚು ಕೋಚಿಂಗ್‌ ಸೆಂಟರ್‌ಗಳಿಗೆ ನೋಟಿಸ್‌ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಮೂವರು ಐಎಎಸ್ ಆಕಾಂಕ್ಷಿಗಳ ಸಾವು ಪ್ರಕರಣದ ಮ್ಯಾಜಿಸ್ಟ್ರೇಟ್ ತನಿಖೆಯ ವರದಿ ಆರು ದಿನಗಳಲ್ಲಿ ಸಲ್ಲಿಸಲಾಗುವುದು ಎಂದು ಆತಿಶಿ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.