| ವಯನಾಡಿನಲ್ಲೇ ಸರ್ವಪಕ್ಷ ಸಭೆ: ರಾಹುಲ್, ಪ್ರಿಯಾಂಕಾ ಭೇಟಿ ಸಾಧ್ಯತೆ ವಯನಾಡು(ಕೇರಳ): ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 276ಕ್ಕೆ ಏರಿಕೆಯಾಗಿದೆ ಎಂದು ಕೇರಳದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ನಡುವೆ ದುರಂತ ಸಂಭವಿಸಿರುವ ವಯನಾಡು ಜಿಲ್ಲೆಯಲ್ಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಸರ್ವಪಕ್ಷಗಳ ಸಭೆ ನಡೆಸಲಿದ್ದಾರೆ. ಜಿಲ್ಲೆಯಲ್ಲಿ ಬೀಡುಬಿಟ್ಟಿರುವ ಸಚಿವರು, ವಯನಾಡು ಶಾಸಕ ಮತ್ತು ಇತರ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಇತ್ತ, ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ಸಾಗುತ್ತಿದೆ. ಅಷ್ಟೇ ಬಿರುಸಾಗಿ ಹರಿಯುತ್ತಿರುವ ನದಿ, ರಕ್ಷಣಾ ಸಿಬ್ಬಂದಿಗೆ ಹೆಚ್ಚಿನ ಸವಾಲೊಡ್ಡುತ್ತಿದೆ. ರಕ್ಷಣೆಗೆ ಸೇನೆ, ನೌಕಾಪಡೆ ನೆರವು ಪಡೆಯಲಾಗಿದೆ. ಎನ್‌ಡಿಆರ್‌ಎಫ್‌ ತಂಡವೂ ಜೊತೆಗೂಡಿದೆ. ಸ್ಥಳೀಯರು ಸಹ ಕೈಜೋಡಿಸಿದ್ದಾರೆ. ಶ್ವಾನ ದಳಗಳನ್ನು ಸಹ ಕರೆಸಲಾಗಿದೆ. ಅತ್ತಮಲ, ಮುಂಡಕ್ಕೈ, ಚೂರಲ್ಮಲಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೆ, ಮೃತರ ಪೈಕಿ ಈವರೆಗೆ 100 ಮಂದಿಯ ಗುರುತು ಪತ್ತೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ನಡುವೆ, ಕಾಂಗ್ರೆಸ್ ನಾಯಕ, ವಯನಾಡು ಮಾಜಿ ಸಂಸದ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇಂದು ವಯನಾಡಿನ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರ ನೋವು ಆಲಿಸುವ ನಿರೀಕ್ಷೆ ಇದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ. ಭೂಕುಸಿತ ಪ್ರದೇಶವನ್ನು ಸಂಪರ್ಕಿಸಲು ತಾತ್ಕಾಲಿಕ ಸೇತುವೆ ನಿರ್ಮಾಣ ಕಾರ್ಯ ಸಹ ಪ್ರಗತಿಯಲ್ಲಿದೆ. ಈ ಭಾಗದಲ್ಲಿ ಜುಲೈ 30ರವರೆಗೆ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ನೀಡಿತ್ತು. ಎರಡು ದಿನದಲ್ಲಿ 115–204 ಮಿ.ಮೀ ಮಳೆ ಆಗಬಹುದು ಎಂದೂ ಅಂದಾಜಿಸಿತ್ತು. ವಾಸ್ತವವಾ‌ಗಿ 572 ಮಿ.ಮೀ. ಮಳೆ ಸುರಿದಿದೆ ಎಂದು ವರದಿಯಾಗಿದೆ. ಅತ್ತಮಲ, ಮುಂಡಕ್ಕೈ, ಚೂರಲ್ಮಲ, ನೂಲ್ಪುಳಗಳಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ಭಾರಿ ಕುಸಿತ ಸಂಭವಿಸಿ ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಸಾವಿಗೆ ಕಾರಣವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.