ಅಪಹರಣ ಆರೋಪ: ಮುಸ್ಲಿಂ ವ್ಯಕ್ತಿಯ ಮನೆಗೆ ಬೆಂಕಿ ಬರೇಲಿ: ತಮ್ಮ ಸಮುದಾಯದ ಮಹಿಳೆಯನ್ನು ಅಪಹರಿಸಿದ್ದಾರೆಂದು ಮುಸ್ಲಿಂ ವ್ಯಕ್ತಿಯೊಬ್ಬರ ಮನೆಯನ್ನು ಧ್ವಂಸ ಮಾಡಿ, ಬೆಂಕಿಹಚ್ಚಿದ ಘಟನೆ ಉತ್ತರ ಪ್ರದೇಶದ ಬರೇಲಿಯ ಚಂದೂಪುರ ಶಿವನಗರ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದರು. ಘಟನೆ ಬಗ್ಗೆ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದ ಪೊಲೀಸರ ಮೇಲೂ ಉದ್ರಿಕ್ತ ಸ್ಥಳೀಯರ ಗುಂಪು ದಾಳಿ ನಡೆಸಿತ್ತು ಎಂದು ಹೇಳಿದರು. ಈ ಪ್ರಕರಣಕ್ಕೆ ಸಂಬಂಧಿಸಿ, ನಿರ್ಲಕ್ಷ್ಯ ಆರೋಪದ ಮೇಲೆ ಶಿರೌಲಿ ಠಾಣೆಯ ಠಾಣಾಧಿಕಾರಿ, ಇಬ್ಬರು ಪೊಲೀಸ್‌ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಬರೇಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್‌ ಆರ್ಯ ಅವರು, ‘ಮೈಕು ಲಾಲ್‌ ಅವರ 20 ವರ್ಷ ವಯಸ್ಸಿನ ಮಗಳು ಮತ್ತು 21 ವರ್ಷ ವಯಸ್ಸಿನ ಸದ್ದಾಂ ಅವರು ನಾಪತ್ತೆಯಾಗಿದ್ದರು. ಆಗಸ್ಟ್‌ 1ರಂದು ಅವರನ್ನು ಪತ್ತೆ ಮಾಡಲಾಯಿತು. ಮಹಿಳೆಯ ತಂದೆ ಮತ್ತು ಗ್ರಾಮಸ್ಥರ ಕೋರಿಕೆ ಮೇರೆಗೆ ಆಕೆಯನ್ನು ಅವರಿಗೆ ಹಸ್ತಾಂತರಿಸಲಾಗಿತ್ತು. ವಿಚಾರಣೆಗಾಗಿ ಸದ್ದಾಂನನ್ನು ವಶಕ್ಕೆ ಪಡೆಯಲಾಗಿತ್ತು’ ಎಂದು ತಿಳಿಸಿದರು. ಈ ಮಧ್ಯೆ ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಸದ್ದಾಂ ಅವರ ನಿವಾಸವನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿದ್ದಾರೆ ಎಂದು ತಿಳಿಸಿದರು. ಘಟನೆ ಬೆನ್ನಲ್ಲೇ ಎರಡೂ ಕಡೆಯಿಂದ ಎಫ್‌ಐಆರ್‌ ದಾಖಲಾಗಿದೆ. ಚಂದೂಪುರ ಶಿವನಗರದಲ್ಲಿ ಸದ್ಯ ಪರಿಸ್ಥಿತಿ ಸುಧಾರಿಸಿದೆ. ಸ್ಥಳದಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.