ನನ್ನ ಕೈ ಮೇಲಿರುವ ಕೈದಿ ಮುದ್ರೆಯು ಪ್ರಜಾಪ್ರಭುತ್ವದ ಸವಾಲುಗಳ ಸಂಕೇತ: ಸೊರೇನ್ ರಾಂಚಿ: ತಮ್ಮ ಕೈ ಮೇಲೆ ಹಾಕಲಾಗಿರುವ ಕೈದಿ ಮುದ್ರೆಯು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಸವಾಲುಗಳ ಸಂಕೇತ ಎಂದು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಹೇಳಿದ್ದಾರೆ. ಜೈಲಿನಿಂದ ಬಿಡುಗಡೆಯಾಗುವ ಸಂದರ್ಭದಲ್ಲಿ ಹಾಕಲಾಗಿರುವ ಕೈದಿ ಮುದ್ರೆಯ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಅವರು, 'ಇಂದು ನನ್ನ ಜನ್ಮದಿನ. ಕಳೆದ ಒಂದು ವರ್ಷದ ನೆನಪುಗಳು ನನ್ನ ಹೃದಯದಲ್ಲಿ ಅಚ್ಚೊತ್ತಿವೆ. –ಇದು ಕೈದಿ ಮುದ್ರೆ. ನಾನು ಜೈಲಿನಿಂದ ಬಿಡುಗಡೆಯಾಗುವಾಗ ಕೈ ಮೇಲೆ ಹಾಕಲಾಗಿತ್ತು. ಈ ಗುರುತು ನನ್ನದಷ್ಟೇ ಅಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸಮಸ್ಯೆಗಳ ಸಂಕೇತ' ಎಂದು ಬರೆದುಕೊಂಡಿದ್ದಾರೆ. ‌ಭೂ ಹಗರಣಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಸೊರೇನ್‌ ಅವರು ರಾಂಚಿಯ ಬಿರ್ಸಾ ಮುಂಡಾ ಜೈಲಿನಿಂದ ಜಾಮೀನಿನ ಮೇಲೆ ಜೂನ್‌ 28ರಂದು ಬಿಡುಗಡೆಯಾಗಿದ್ದಾರೆ. ಈ ಸಂಬಂಧ ಕಿಡಿಕಾರಿರುವ ಅವರು, 'ಚುನಾಯಿತ ಮುಖ್ಯಮಂತ್ರಿಯೊಬ್ಬರನ್ನು ಯಾವುದೇ ಸಾಕ್ಷ್ಯ, ದೂರು ಅಥವಾ ಅಪರಾಧದ ಹಿನ್ನಲೆ ಇಲ್ಲದೆ 150 ದಿನಗಳ ಕಾಲ ಜೈಲಿನಲ್ಲಿಡಬಹುದು ಎಂದರೆ, ಸಾಮಾನ್ಯ ಬುಡಕಟ್ಟು ಜನರು, ದಲಿತರು, ದಮನಿತರಿಗೆ ಏನೆಲ್ಲ ಮಾಡಬಹುದು – ಅದನ್ನು ಹೇಳುವ ಅಗತ್ಯವೇ ಇಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಶೋಷಿತರು, ನಿರ್ಗತಿಕರು, ದಲಿತರು, ಹಿಂದುಳಿದವರು, ಬುಡಕಟ್ಟು ಸಮುದಾಯದವರು ಮತ್ತು ಸ್ಥಳೀಯರ ಹಕ್ಕುಗಳಿಗಾಗಿ ಹೋರಾಟ ನಡೆಸುವ ನನ್ನ ಸಂಕಲ್ಪವನ್ನು ಇಂದು ಮತ್ತಷ್ಟು ದೃಢ ಹಾಗೂ ಗಟ್ಟಿಗೊಳಿಸಿದ್ದೇನೆ' ಎಂದಿದ್ದಾರೆ. ಪ್ರತಿಯೊಬ್ಬ ವ್ಯಕ್ತಿ, ಸಮುದಾಯ, ಅನ್ಯಾಯಕ್ಕೊಳಗಾದವರು ಹಾಗೂ ಬಣ್ಣ, ಜಾತಿ, ಆಹಾರ ಕ್ರಮ, ವಸ್ತ್ರ ಮತ್ತಿತರ ವಿಚಾರಗಳ ಆಧಾರದಲ್ಲಿ ದೌರ್ಜನ್ಯಕ್ಕೊಳಗಾದವರ ಪರ ದನಿ ಎತ್ತುವುದಾಗಿ ಭರವಸೆ ನೀಡಿದ್ದಾರೆ. 'ನಾವೆಲ್ಲರೂ ಒಂದಾಗಬೇಕಿದೆ. ಎಲ್ಲರಿಗೂ ಸಮಾನ ಕಾನೂನು ವ್ಯವಸ್ಥೆ ಇರುವ ಹಾಗೂ ಅಧಿಕಾರ ದುರ್ಬಳಕೆಗೆ ಅವಕಾಶವೇ ಇಲ್ಲದಂತಹ ಸಮಾಜವನ್ನು ಕಟ್ಟಬೇಕಿದೆ' ಎಂದು ಕರೆ ನೀಡಿದ್ದಾರೆ. ಹಾಗೆಯೇ, ಆ ಹಾದಿ ಸುಲಭದ್ದಲ್ಲ ಎಂದೂ ಒತ್ತಿ ಹೇಳಿದ್ದಾರೆ. 'ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ, ನಾವೆಲ್ಲರೂ ಒಂದಾಗಿ ಆ ಸವಾಲುಗಳನ್ನು ಮೀರಲು ಸಾಧ್ಯ ಎಂಬ ವಿಶ್ವಾಸವಿದೆ. ಏಕೆಂದರೆ, ಈ ದೇಶದ ಏಕತೆ ಮತ್ತು ವೈವಿಧ್ಯತೆಯೇ ನಮ್ಮ ಶಕ್ತಿ' ಎಂದು ಪ್ರತಿಪಾದಿಸಿದ್ದಾರೆ. ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯಕಾರಿ ಅಧ್ಯಕ್ಷರೂ ಆಗಿರುವ ಸೊರೇನ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಜನವರಿ 31ರಂದು ರಾಜೀನಾಮೆ ನೀಡಿದ ಕೆಲವೇ ಹೊತ್ತಿನಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬಂಧಿಸಿದ್ದರು. आज अपने जन्मदिन के मौक़े पर बीते एक साल की स्मृति मेरे मन में अंकित है - वह है यह कैदी का निशान - जो जेल से रिहा होते वक्त मुझे लगाया गया। यह निशान केवल मेरा नहीं, बल्कि हमारे लोकतंत्र की वर्तमान चुनौतियों का प्रतीक है। जब एक चुने हुए मुख्यमंत्री को बिना किसी सबूत, बिना कोई… ../TsKovjS1HY ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.