ಮಹಿಳೆಯರ ವಿರುದ್ಧ ಅಪರಾಧ | ತುರ್ತು ಕ್ರಮ ಅಗತ್ಯ: ಪ್ರಧಾನಿ ಮೋದಿ ನವದೆಹಲಿ: ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳ ಕುರಿತು ರಾಜ್ಯ ಸರ್ಕಾರಗಳು ಅತ್ಯಂತ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು. ಸ್ವಾತಂತ್ರ್ಯೋತ್ಸವ ಅಂಗವಾಗಿ ಕೆಂಪುಕೋಟೆಯಿಂದ ಭಾಷಣ ಮಾಡಿದ ಅವರು, ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು. ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಅವರ ವಿರುದ್ಧ ಹಿಂಸಾಚಾರದ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ‘ಈ ವಿಚಾರವಾಗಿ ಜನರಿಂದ ವ್ಯಕ್ತವಾಗುತ್ತಿರುವ ಆಕ್ರೋಶ ನನಗೆ ಅರ್ಥವಾಗುತ್ತದೆ’ ಎಂದರು. ‘ಮಹಿಳೆಯರ ಮೇಲಿನ ಅಪರಾಧಗಳ ಕುರಿತು ತ್ವರಿತವಾಗಿ ತನಿಖೆ ನಡೆಸಬೇಕು. ಇಂತಹ ಪೈಶಾಚಿಕ ಕೃತ್ಯಗಳನ್ನು ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದ ಅವರು, ‘ಇಂತಹ ಕೃತ್ಯಗಳ ಬಗ್ಗೆ ಸಮಾಜವು ಸಹ ಆತ್ಮಾವಲೋಕನ ನಡೆಸಬೇಕು’ ಎಂದರು. ‘ಅಪರಾಧಿಗಳಲ್ಲಿ ಅವರು ಎದುರಿಸಬೇಕಾದ ಶಿಕ್ಷೆ ಬಗ್ಗೆ ಭಯ ಉಂಟಾಗುವಂತೆ ಮಾಡಬೇಕು. ಇಂತಹ ಪಾಪದ ಕೆಲಸಗಳನ್ನು ಮಾಡಿದರೆ, ನಮ್ಮನ್ನು ಗಲ್ಲಿಗೇರಿಸಲಾಗುತ್ತದೆ ಎಂಬ ಅರಿವು ಅಪರಾಧ ಎಸಗುವವರಲ್ಲಿರಬೇಕು ’ ಎಂದು ಹೇಳಿದರು. ನೂತನ ಅಪರಾಧಿಕ ಕಾಯ್ದೆಗಳಲ್ಲಿ, ಶಿಕ್ಷೆ ವಿಧಿಸುವುದಕ್ಕಿಂತಲೂ ನ್ಯಾಯ ಒದಗಿಸುಲು ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು. ಭಾಷಣದ ಪ್ರಮುಖ ಅಂಶಗಳು ವೇತನ ಸಹಿತ ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಲಾಗಿದೆ. ತಾಯಿಯ ಆರೈಕೆಯಲ್ಲಿ ಬೆಳೆಯುವ ಮಗು ಮಾದರಿ ಪ್ರಜೆಯಾಗಬಲ್ಲ ಎಂಬ ಉದಾತ್ತ ಚಿಂತನೆಯೇ ಇಂತಹ ನಿರ್ಧಾರಕ್ಕೆ ಕಾರಣ ಉದ್ಯೋಗ, ನಾವೀನ್ಯತೆ, ಉದ್ಯಮಶೀಲತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ‘ಮಹಿಳೆ ಕೇಂದ್ರಿತ ಅಭಿವೃದ್ಧಿ ಮಾದರಿ’ಗೆ ಉತ್ತೇಜನ ನೀಡಲಾಗಿದೆ * ವಾಯುಪಡೆ, ನೌಕಾಪಡೆ, ಸೇನೆ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಮಹಿಳೆಯರು ಛಾಪು ಮೂಡಿಸಿದ್ದಾರೆ ‘ವಿಕಸಿತ ಭಾರತ 2047’ ಎಂಬುದು ಕೇವಲ ಪದಪುಂಜವಲ್ಲ. 140 ಕೋಟಿ ಭಾರತೀಯರ ಕನಸು ಮತ್ತು ಸಂಕಲ್ಪ ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಲು ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಪ್ರಗತಿ ಅಗತ್ಯ. ಉಜ್ವಲ ಭವಿಷ್ಯ ಇರುವ ಈ ಕ್ಷೇತ್ರವನ್ನು ಬಲಪಡಿಸಲಾಗುತ್ತಿದೆ ಚಂದ್ರಯಾನ ಕಾರ್ಯಕ್ರಮದ ಯಶಸ್ಸು ದೇಶದ ಯುವ ಸಮುದಾಯದಲ್ಲಿ ವೈಜ್ಞಾನಿಕ ಮನೋಧರ್ಮ ಹೆಚ್ಚುವಂತೆ ಮಾಡಿದೆ. ಯುವ ಜನರಲ್ಲಿ ಇಂತಹ ಬದಲಾವಣೆಯನ್ನು ಶೈಕ್ಷಣಿಕ ಸಂಸ್ಥೆಗಳು ಪೋಷಿಸಬೇಕು ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ. ಮುಂದಿನ ಐದು ವರ್ಷಗಳಲ್ಲಿ 75 ಸಾವಿರ ಹೊಸ ವೈದ್ಯಕೀಯ ಸೀಟುಗಳನ್ನು ಸೃಷ್ಟಿಸಲಾಗುವುದು 5ಜಿ ತಂತ್ರಜ್ಞಾನಕ್ಕೆ ತ್ವರಿತವಾಗಿ ಚಾಲನೆ ನೀಡಲಾಗಿದ್ದರೂ, 6ಜಿ ತಂತ್ರಜ್ಞಾನ ಕುರಿತು ಸಮರೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ ‘ಭಾರತದಲ್ಲಿ ವಿನ್ಯಾಸಗೊಳಿಸಿ’ ಎಂಬ ಮಂತ್ರದಿಂದ ಶುರುವಾದ ನಮ್ಮ ಪಯಣ, ಈಗ ‘ವಿಶ್ವಕ್ಕಾಗಿ ವಿನ್ಯಾಸಗೊಳಿಸಿ’ ಎಂಬ ಧ್ಯೇಯವಾಕ್ಯದೊಂದಿಗೆ ಸಾಗಬೇಕಿದೆ l2036ರ ಒಲಿಂಪಿಕ್ಸ್‌ನ ಆತಿಥ್ಯ ವಹಿಸಬೇಕು ಎಂಬುದು ಭಾರತದ ಕನಸು. ಈ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸಿದ್ಧತೆ ನಡೆಸಲಾಗುತ್ತಿದೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.