ಮುಡಾ ಹಗರಣ ಮುಚ್ಚಿಹಾಕಲು ಯತ್ನ: ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆರೋಪ ಯಾವುದೇ ಹಗರಣ ನಡೆದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿಕೆ ನೀಡಿದ್ದಾರೆ. ಆದರೆ, ವಿಶೇಷ ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ತೆರಳಿ ಕಡತ, ದಾಖಲೆಗಳನ್ನು ತಂದಿದ್ದಾರೆ. ಅವ್ಯವಹಾರಗಳು ನಡೆದಿಲ್ಲ ಎಂದಾದರೆ ಸರ್ಕಾರ ಅಧಿಕಾರಿಗಳನ್ನೇಕೆ ತನಿಖೆಗೆ ಕಳುಹಿಸುತ್ತಿದೆ? ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿರುವ ಅಕ್ರಮಗಳನ್ನು ಮುಚ್ಚಿಹಾಕಲು \ ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಶನಿವಾರ ಆರೋಪಿಸಿದ್ದಾರೆ.ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೊಂದು ದೊಡ್ಡ ಹಗರಣವಾಗಿದ್ದು, ಸರ್ಕಾರ ಅದನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.ಯಾವುದೇ ಹಗರಣ ನಡೆದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿಕೆ ನೀಡಿದ್ದಾರೆ. ಆದರೆ, ವಿಶೇಷ ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ತೆರಳಿ ಕಡತ, ದಾಖಲೆಗಳನ್ನು ತಂದಿದ್ದಾರೆ. ಅವ್ಯವಹಾರಗಳು ನಡೆದಿಲ್ಲ ಎಂದಾದರೆ ಸರ್ಕಾರ ಅಧಿಕಾರಿಗಳನ್ನೇಕೆ ತನಿಖೆಗೆ ಕಳುಹಿಸುತ್ತಿದೆ? ಏಕಾಏಕಿ ಜಿಲ್ಲಾಧಿಕಾರಿಗಳ ವರ್ಗಾವಣೆ ಏಕೆ? ವರ್ಗಾವಣೆಗೊಂಡ ಅಧಿಕಾರಿ ಈ ಹಗರಣದ ಬಗ್ಗೆ ಎಷ್ಟು ಬಾರಿ ಸರ್ಕಾರಕ್ಕೆ ದೂರು ನೀಡಿದ್ದಾರೆ? ಎಂದು ಪ್ರಶ್ನಿಸಿದರು.ಇದೇ ವೇಳೆ ತಮ್ಮನ್ನು ಹುಚ್ಚ ಎಂದ ಡಿಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜನರು ಇಬ್ಬರನ್ನೂ ಸೂಕ್ಷ್ಮವಾಗಿ ಗಮನಿಸಲಿ, ಯಾರಿಗೆ ಹುಚ್ಚು ಎಂಬುದು ತಿಳಿಯುತ್ತದೆ ಎಂದು ತಿರುಗೇಟು ನೀಡಿದರು.ಡಿಕೆ.ಶಿವಕುಮಾರ್ ಅವರು ನನ್ನ ಆರೋಗ್ಯದ ಬಗ್ಗೆ ಚಿಂತಿಸುವುದು ಬೇಡ. ನನಗೆ ಹೃದಯದ ಸಮಸ್ಯೆ ಇತ್ತು. ಕವಾಟವನ್ನು ಬದಲಾಯಿಸಬೇಕಾಗಿತ್ತು. ಅದನ್ನು ಮಾಡಲಾಗಿದೆ. ಈಗಾಗಲೇ ಅವರು ನನ್ನ ಬಗ್ಗೆ ಚಿಂತಿಸುತ್ತಿದ್ದಾರೆ? ಎಂದರು.ಬಳಿಕ ಎಸ್‌ಸಿ/ಎಸ್‌ಟಿ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ತಿರುಗಿಸುತ್ತಿರುವ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಡಿಕೆಶಿ ತಿರುಗೇಟು:ಮುಡಾ ಹಗರಣದಲ್ಲಿ ಸಾಕ್ಷ್ಯ ನಾಶಪಡಿಸಲು ಯತ್ನಿಸುತ್ತಿದೆ ಎಂಬ ಆರೋಪಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಿಡಿಕಾರಿದ್ದಾರೆ.ಯಾರೂ ಏನನ್ನೂ ಮುಚ್ಚಿಡುವ ಅಗತ್ಯವಿಲ್ಲ. ಅಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಮುಡಾ ಲೇಔಟ್‌ಗಳಿಗೆ ಭೂಮಿ ಕಳೆದುಕೊಂಡ ಜನರಿಗೆ ಮುಡಾದ ನಿಬಂಧನೆಗಳ ಪ್ರಕಾರ ಪರಿಹಾರ ನೀಡಲಾಗಿದೆ. ಬಿಡಿಎ 60:40 ಅನುಪಾತವನ್ನು ಹೊಂದಿರುವಂತೆ, ಮುಡಾ 50:50 ಅನುಪಾತವನ್ನು ಹೊಂದಿದೆ. ಪರಿಹಾರವು ಕಾನೂನಿನಂತೆ ಇರುತ್ತದೆ ಎಂದು ಹೇಳಿದರು.2010ರಲ್ಲಿ ಹಂಚಿಕೆಯಾದ ನಿವೇಶನಗಳನ್ನು 2013ರ ಚುನಾವಣಾ ಅಫಿಡವಿಟ್‌ನಲ್ಲಿ ನಮೂದಿಸಿಲ್ಲ ಎಂಬ ಆರೋಪದ ಕುರಿತು ಮಾತನಾಡಿ, ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಾರಿಯ ಅಫಿಡವಿಟ್ ಎಲ್ಲಾ ವಿವರಗಳನ್ನು ಹೊಂದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಹಾರ ನೀಡಲಾಗಿದೆ. ಈಗ ಅವರು ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಎತ್ತುತ್ತಿದ್ದಾರೆಂದು ತಿಳಿಸಿದರು