ನನ್ನ ಸಹೋದರನಿಗೆ ಜನ ವಿಶ್ರಾಂತಿ ನೀಡಿದ್ದಾರೆ; ಚನ್ನಪಟ್ಟಣಕ್ಕೆ‌ ಅಳಿಲು ಸೇವೆ ಮಾಡಲು ಸೂಕ್ತ ಸಮಯ ಒದಗಿ ಬಂದಿದೆ: ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ತಮ್ಮ ಡಿ.ಕೆ.ಸುರೇಶ್‌ಗೆ ಆಸಕ್ತಿಯಿಲ್ಲ. ಜನರು ನಮಗೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಹೇಳಿದ್ದಾರೆ. ಆದರೆ ಪಕ್ಷದ ಕೆಲಸ ಮಾಡಬೇಕೆಂಬ ಆಸೆಯಿದೆ. ಮಂಗಳೂರು: ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ತಮ್ಮ ಡಿ.ಕೆ.ಸುರೇಶ್‌ಗೆ ಆಸಕ್ತಿಯಿಲ್ಲ. ಜನರು ನಮಗೆ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಹೇಳಿದ್ದಾರೆ. ಆದರೆ ಪಕ್ಷದ ಕೆಲಸ ಮಾಡಬೇಕೆಂಬ ಆಸೆಯಿದೆ. ಅಲ್ಲಿನ 85 ಸಾವಿರ ಮಂದಿ ನಮಗೆ ಮತಕೊಟ್ಟಿದ್ದಾರೆ. ಚನ್ನಪಟ್ಟಣದಲ್ಲಿ ಏನೂ ಅಭಿವೃದ್ಧಿ ಆಗಿಲ್ಲ ಎಂಬ ಭಾವನೆ ಅಲ್ಲಿನ ಜನರಲ್ಲಿದೆ. ಅಲ್ಲಿನವರಿಗೆ ಅಳಿಲು ಸೇವೆ ಮಾಡೋಣ ಎಂದು ಭಾವಿಸಿದ್ದೇವೆ. ಅದಕ್ಕೀಗ ಸೂಕ್ತ ಸಮಯ ಒದಗಿ ಬಂದಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಮ್ಮನ್ನು ನಂಬಿದವರನ್ನು ಬಿಡುವುದಕ್ಕೆ ಆಗುವುದಿಲ್ಲ. ದೇವರು ನಮಗೆ ಅಧಿಕಾರ ಕೊಟ್ಟಿದ್ದಾರೆ. ಜನ 136 ಸೀಟ್ ಕೊಟ್ಟಿದ್ದಾರೆ. ಅದನ್ನು ಉಳಿಸಬೇಕಿದೆ ಎಂದರು.ಚನ್ನಪಟ್ಟಣಕ್ಕೆ ನಾನು ಏನೂ ಮಾಡಿಲ್ಲವೆಂದು ಎಚ್.ಡಿ.ಕುಮಾರಸ್ವಾಮಿಯವರಿಗೇನು ಗೊತ್ತು. ಅವರು ಚನ್ನಪಟ್ಟಣ ನೋಡುವುದಕ್ಕೂ ಮೊದಲೇ ನಾನು ನೋಡಿದ್ದೇನೆ. ಅವರು ಬಹಳ ತಡವಾಗಿ ರಾಜಕೀಯಕ್ಕೆ ಬಂದವರು. ನಾನು 1985ರಲ್ಲೆ ಚುನಾವಣೆ ಎದುರಿಸಿದವನು. ಅವರು 1995ರ ಬಳಿಕ ರಾಜಕೀಯ ಪ್ರವೇಶಿಸಿದವರು‌. ಅವರಿಗಿಂತ 10 ವರ್ಷಕ್ಕಿಂತ ಮೊದಲೇ ನನಗೆ ಚನ್ನಪಟ್ಟಣ ಗೊತ್ತು. ನಾನು ಅದೇ ಜಿಲ್ಲೆಯವನು' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಇನ್ನಷ್ಟು ಮಂದಿಯನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂಬ ಬೇಡಿಕೆ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ನೀವು ದಿನವೂ ಈ ಬಗ್ಗೆ ಸುದ್ದಿ ಮಾಡುತ್ತಿದ್ದೀರಿ. ಇದರಿಂದ ಖುಷಿ ಆಗುವವರಿಗೆ ಆಗಲಿ. ಖುಷಿ ಪಡುವವರನ್ನು ನಾನೇಕೆ ಬೇಡ ಎನ್ನಲಿ. ಯಾರು ಏನು ಬೇಕಾದರೂ ಬೇಡಿಕೆ ಸಲ್ಲಿಸಲಿ. ಪಕ್ಷವು ಯಾರಿಗೆ ಎಲ್ಲಿ ಉತ್ತರ ಕೊಡಬೇಕೋ ಕೊಡುತ್ತದೆ' ಎಂದರು.ತಮ್ಮ ಮೇಲಿನ ದ್ವೇಷದ ಕಾರಣಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಗೆ ರಾಜ್ಯ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ‘ಮೈನಿಂಗ್ ಬಗ್ಗೆ ಹೆಚ್‌ಡಿಕೆಗೆ ಏನು ಮಾಹಿತಿ ಇದೆಯೋ ಗೊತ್ತಿಲ್ಲ. ನನಗಂತೂ ಏನೂ ಗೊತ್ತಿಲ್ಲ’ ಎಂದು ಹೇಳಿದರು.