: ಅಹೋರಾತ್ರಿ ಧರಣಿ ರಾಜಕೀಯ ನಾಟಕವಷ್ಟೇ- ಸಚಿವ ಪಾಟೀಲ್ ಮುಡಾದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಮುಖ್ಯಮಂತ್ರಿಯೊಬ್ಬರು ತಮ್ಮ ವಿರುದ್ಧ ಆರೋಪ ಬಂದಾಗ ಈ ರೀತಿ ತನಿಖಾ ಆಯೋಗ ರಚಿಸಿದ ಉದಾಹರಣೆ ಇದೆಯೇ?. ಬೆಂಗಳೂರು: ಮುಡಾ ವಿಚಾರದಲ್ಲಿ ಚರ್ಚೆಗೆ ಅವಕಾಶ ನೀಡಲಿಲ್ಲವೆಂದು ವಿರೋದ ಪಕ್ಷದವರು ಅಹೋರಾತ್ರಿ ಧರಣಿ ನಡೆಸಿರುವುದು ರಾಜಕೀಯ ನಾಟಕವಷ್ಟೇ ಎಂದು ಕಾನೂನು ಸಚಿವ ಹೆಚ್‌.ಕೆ. ಪಾಟೀಲ್ ಅವರು ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಪರ್ಯಾಯ ನಿವೇಶನ (ಪ್ಲಾಟ್‌) ಹಗರಣ ವಿಚಾರವನ್ನು ಚರ್ಚೆಗೆ ಏಕೆ ಕೈಗೆತ್ತಿಕೊಳ್ಳಲಾಗುತ್ತಿಲ್ಲ ಎಂಬುದನ್ನು ವಿವರಿಸಿದರೂ ಬಿಜೆಪಿಯು ನಡೆಯುತ್ತಿರುವ ವಿಧಾನಮಂಡಲ ಅಧಿವೇಶನವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದರು.ಮುಡಾದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ತನಿಖೆಗೆ ಆಯೋಗ ರಚಿಸಿದ್ದಾರೆ. ಮುಖ್ಯಮಂತ್ರಿಯೊಬ್ಬರು ತಮ್ಮ ವಿರುದ್ಧ ಆರೋಪ ಬಂದಾಗ ಈ ರೀತಿ ತನಿಖಾ ಆಯೋಗ ರಚಿಸಿದ ಉದಾಹರಣೆ ಇದೆಯೇ? ಪ್ರಶ್ನಿಸಿದರು.ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ, ಬಿ.ಎಸ್‌. ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಮೇಲೂ ಆರೋಪಗಳಿದ್ದವು. ಮುಡಾ ವಿಚಾರದಲ್ಲಿ ಆಯೋಗ ರಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವನ್ನು ವಿರೋದ ಪಕ್ಷದವರು ಪ್ರಶಂಸೆ ಮಾಡಬೇಕಿತ್ತು. ಆದರೆ, ಅವರು ಧರಣಿ ನಡೆಸುತ್ತಿರುವುದು ಕೇವಲ ರಾಜಕೀಯ ನಾಟಕ’ ಎಂದು ಟೀಕಿಸಿದರು.ಉತ್ತರ ಕನ್ನಡ, ಮಲೆನಾಡು ಭಾಗದಲ್ಲಿ ಮಳೆಯಿಂದಾಗಿ ಸಾಕಷ್ಟು ಅನಾಹುತ ಆಗಿದೆ. ಅಧಿವೇಶನದಲ್ಲಿ ಈ ವಿಷಯಗಳ ಬಗ್ಗೆ ಚರ್ಚೆ ಮಾಡಿಲ್ಲ. ಆ ಕುರಿತು ಚರ್ಚೆ ಆಗಬೇಕಿದೆ. ಒಂದೇ ದೇಶ, ಒಂದು ಚುನಾವಣೆ ಮತ್ತು ನೀಟ್ ವಿರೋಧಿಸಿ ನಿರ್ಣಯ ಮಂಡಿಸಬೇಕಿದೆ ಎಂದರು.