2006 ಮಾದರಿಯಲ್ಲೇ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರೆ ಕಾಂಗ್ರೆಸ್ ಮಣ್ಣು ಮುಕ್ಕುತ್ತಿತ್ತು: ಹೆಚ್.ಡಿ ಕುಮಾರಸ್ವಾಮಿ 2006ರ ಮಾದರಿಯಲ್ಲೇ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಿದ್ದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕುತ್ತಿತ್ತು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್ ಡಿ ಕುಮಾರಸ್ವಾಮಿ ಶನಿವಾರ ಹೇಳಿದರು. ಬೆಂಗಳೂರು: 2006ರ ಮಾದರಿಯಲ್ಲೇ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಿದ್ದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕುತ್ತಿತ್ತು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್ ಡಿ ಕುಮಾರಸ್ವಾಮಿ ಶನಿವಾರ ಹೇಳಿದರು.ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯ ಘಟಕದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕೇಂದ್ರದ ನೂತನ ಸಚಿವರು ಮತ್ತು ಎನ್‌ಡಿಎ ಸಂಸದರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಲೋಕಸಭಾ ಚುನಾವಣೆಯಲ್ಲಿ ಆರಂಭವಾದ ಮೈತ್ರಿ ಮುಂದುವರಿಯಬೇಕು. ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಸೇರಿ ಮುಂಬರುವ ಎಲ್ಲ ಚುನಾವಣೆಗಳಲ್ಲೂ ಮೈತ್ರಿ ಇರಬೇಕು. ಎರಡೂ ಪಕ್ಷಗಳೂ ಮುಕ್ತ ಮನಸ್ಸಿನಿಂದ ಸಾಗಬೇಕು. ಮೈತ್ರಿಕೂಟ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೂ ಸಜ್ಜಾಗಬೇಕು ಎಂದು ಹೇಳಿದರು.ನಮ್ಮಗಳ ಮಧ್ಯೆ ಯಾವುದೇ ಒಡಕು ಇರಬಾರದು. ಅಣ್ಣ, ತಮ್ಮಂದಿರ ರೀತಿಯಲ್ಲಿ ಇರಬೇಕು. ಒಗ್ಗಟ್ಟು ಮುರಿಯಲು ಯಾರೇ ಯತ್ನಿಸಿದರೂ ಕಿವಿ ಮೇಲೆ ಹಾಕಿಕೊಳ್ಳಬಾರದು ಎಂದು ತಿಳಿಸಿದರು.2006ರಲ್ಲಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ್ದರಿಂದ ಈ ನಾಡಿಗೆ ನನ್ನ ಪರಿಚಯ ಆಯಿತು. ಅದಕ್ಕೆ ಕಾರಣ ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರು. ನನಗಿಂತ ಹಿರಿಯರಾದರೂ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಮುಕ್ತ ಸಹಕಾರ ನೀಡಿದ್ದರು ಎಂದರು.ರಾಜ್ಯದ ಜನರು ಮೈತ್ರಿ ಶಾಶ್ವತವಾಗಿರಬೇಕೆಂದು ಬಯಸಿದ್ದರು ಮತ್ತು ಅದು ನನ್ನ ಆಸೆಯೂ ಆಗಿತ್ತು. 20 ತಿಂಗಳ ನಂತರ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಬೇಕಿತ್ತು. ಕೆಲವರ ಕುತಂತ್ರದಿಂದ ಆಗಲಿಲ್ಲ. ಆಗ ನಮ್ಮ ಮೈತ್ರಿಕೂಟ ಅಧಿಕಾರದಲ್ಲಿ ಮುಂದುವರಿದಿದ್ದರೆ ಈಗ ಕಾಂಗ್ರೆಸ್‌ ಪಕ್ಷವೇ ರಾಜ್ಯದಲ್ಲಿ ಇರುತ್ತಿರಲಿಲ್ಲ. ನಮ್ಮ ತಪ್ಪಿನಿಂದಾಗಿ ಕಾಂಗ್ರೆಸ್ ಪಕ್ಷ ಉಳಿದುಕೊಂಡಿದೆ. ಹಿಂಂದಿನದ್ದನ್ನು ಮರೆಯಬೇಕಿದ್ದು, ಬಿಜೆಪಿ ಜೊತೆಗೆ ಮೈತ್ರಿ ಮುಂದುವರೆಸಲು ನಮಗೆ ಯಾವುದೇ ಸಮಸ್ಯೆಗಳಿಲ್ಲ. 2018ರಲ್ಲಿಯೂ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ರಚಿಸಬೇಕು ಎಂದುಕೊಂಡಿದ್ದೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಕೈಜೋಡಿಸಿದೆವು. ಯಡಿಯೂರಪ್ಪ ಹಾಗೂ ಎಚ್‌ಡಿ ದೇವೇಗೌಡರು ಇಳಿಯವಯಸ್ಸಿನಲ್ಲೂ ರಾಜ್ಯ ಪ್ರವಾಸ ಮಾಡಿ ಬಿಜೆಪಿ ಗೆಲುವಿಗೆ ಶ್ರಮಿಸಿದ್ದಾರೆಂದು ಹೇಳಿದರು.