ನಿವೇಶನ ಹಂಚಿಕೆಗೆ ಸಿದ್ದರಾಮಯ್ಯರಿಂದ ಅಧಿಕಾರ ದುರ್ಬಳಕೆ: ಜಗದೀಶ್ ಶೆಟ್ಟರ್ ಮುಡಾದಿಂದ ಮುಖ್ಯಮಂತ್ರಿ ಅವರ ಪತ್ನಿ ಪಾರ್ವತಿಗೆ ಬದಲಿ ನಿವೇಶನ ಹಂಚಿಕೆಯಾಗಿರುವುದು ಬಹಳ ಚರ್ಚೆಗೆ ಗ್ರಾಸವಾಗಿದೆ. ಈಗ ಮುಖ್ಯಮಂತ್ರಿಗಳ ಹೆಸರು ಕೇಳಿ ಬಂದಿರುವುದರಿಂದ ಪ್ರಕರಣವನ್ನು ಮಚ್ಚಿ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿತ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಾವಿರಾರು ಕೋಟಿ ರೂಪಾಯಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ತಳುಕು ಹಾಕಿಕೊಂಡಿರುವುದರಿಂದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.ಮುಡಾದಿಂದ ಮುಖ್ಯಮಂತ್ರಿ ಅವರ ಪತ್ನಿ ಪಾರ್ವತಿಗೆ ಬದಲಿ ನಿವೇಶನ ಹಂಚಿಕೆಯಾಗಿರುವುದು ಬಹಳ ಚರ್ಚೆಗೆ ಗ್ರಾಸವಾಗಿದೆ. ಈಗ ಮುಖ್ಯಮಂತ್ರಿಗಳ ಹೆಸರು ಕೇಳಿ ಬಂದಿರುವುದರಿಂದ ಪ್ರಕರಣವನ್ನು ಮಚ್ಚಿ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ಸಿಎಂಗೆ ವರದಿ ನೀಡುವ ಐಎಎಸ್ ಅಧಿಕಾರಿಗಳಿಂದ ನ್ಯಾಯಯುತ ತನಿಖೆ ನಿರೀಕ್ಷಿಸಲು ಸಾಧ್ಯವಿಲ್ಲದ, ಹೀಗಾಗಿ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.ಮುಡಾ ಅಧಿಕಾರಿಗಳು ಲೇಔಟ್ ಅಭಿವೃದ್ಧಿಪಡಿಸುವಾಗ ಏನು ಮಾಡುತ್ತಿದ್ದರು?... ಲೇಔಟ್ ಅಭಿವೃದ್ಧಿ ಕಾಮಗಾರಿ ರಾತ್ರೋರಾತ್ರಿ ಆಗುವುದಿಲ್ಲ, ಆರು ತಿಂಗಳಿಂದ ಒಂದು ವರ್ಷ ಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಡಾಕ್ಕೆ ತಪ್ಪು ಮಾಡಲು ಅವಕಾಶ ಮಾಡಿಕೊಟ್ಟು 14 ಸೈಟ್‌ಗಳನ್ನು ಮಂಜೂರು ಮಾಡಿದ್ದಾರೆ, ನಿವೇಶನ ಹಂಚಿಕೆ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.ಸಿದ್ದರಾಮಯ್ಯ ಅವರು ಮೊದಲ ಸಿಎಂ ಆಗಿದ್ದಾಗ ಬೆಂಗಳೂರಿನ ಅರ್ಕಾವತಿ ಲೇಔಟ್‌ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ವರದಿ ಇನ್ನೂ ವಿಧಾನಸಭೆಯಲ್ಲಿ ಮಂಡನೆಯಾಗಿಲ್ಲ. ಅಕ್ರಮಗಳನ್ನು ಮುಚ್ಚಿಹಾಕಲು ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ ಎಂದು ತಿಳಿಸಿದರು.