ಫೇರ್ನೆಸ್ ಕ್ರೀಮ್ ಜಾಹಿರಾತಿನ ನಟಿಯರನ್ನು ಕಂಡರೆ ನಾಚಿಕೆಯಾಗುತ್ತದೆ: ಕಂಗನಾ ಫೇರ್ನೆಸ್ ಕ್ರೀಮ್ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ಬಾಲಿವುಡ್ ನಟ-ನಟಿಯರನ್ನು ಕಂಡರೆ ನಾಚಿಕೆಯಾಗುತ್ತದೆ ಎಂದು ಬಾಲಿವುಡ್ ನಟಿ ಕಂಗನಾ ರನೌತ್ ಹೇಳಿದ್ದಾರೆ... ಕರಾಚಿ: ಫೇರ್ನೆಸ್ ಕ್ರೀಮ್ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ಬಾಲಿವುಡ್ ನಟ-ನಟಿಯರನ್ನು ಕಂಡರೆ ನಾಚಿಕೆಯಾಗುತ್ತದೆ ಎಂದು ಬಾಲಿವುಡ್ ನಟಿ ಕಂಗನಾ ರನೌತ್ ಹೇಳಿದ್ದಾರೆ. ತಮ್ಮ ನೂತನ ಚಿತ್ರ ಕಟ್ಟಿ-ಬಟ್ಟಿ ಚಿತ್ರದ ಪ್ರಚಾರದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ಕಂಗನಾ ರನೌತ್ ಅವರು, ಸೌಂದರ್ಯ ವರ್ಧಕ ಜಾಹಿರಾತುಗಳ ವಿರುದ್ಧದ ತಮ್ಮ ವಾಗ್ದಾಳಿ ಮುಂದುವರೆಸಿದ್ದು, ಈ ಬಾರಿ ಬಿ-ಟೌನ್ ನ ನಟಿ-ನಟರನ್ನು ತಮ್ಮ ವಾಗ್ದಾಳಿಯ ಗುರಿಯಾಗಿಸಿಕೊಂಡಿದ್ದಾರೆ. ಮುಖಕಾಂತಿ ಹೆಚ್ಚಿಸುತ್ತೇವೆ ಎಂದು ಸುಳ್ಳು ಹೇಳಿಕೊಂಡು ತಿರುಗುವ ಸೌಂದರ್ಯ ವರ್ಧಕ ಸಾಮಗ್ರಿಗಳ ಜಾಹಿರಾತು ಮಾಡುವುದಿಲ್ಲ ಎಂದು ಹೇಳಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಇದೀಗ ಇಂತಹ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವ ಬಿ-ಟೌನ್ ನಟ-ನಟಿಯರ ವಿರುದ್ಧ ತಿರುಗಿಬಿದ್ದಿದ್ದಾರೆ. ಸೌಂದರ್ಯ ವರ್ಧಕ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವ ನಟ-ನಟಿಯರನ್ನು ಕಂಡರೆ ತಮಗೆ ನಾಚಿಕೆಯಾಗುತ್ತದೆ ಎಂದು ಹೇಳಿರುವ ಅವರು, ನೈಜ ಭಾರತೀಯ ಸೌಂದರ್ಯವನ್ನು ಅಪಮಾನ ಮಾಡುವ ಇಂತಹ ಸೌಂದರ್ಯ ವರ್ಧಕಗಳ ಜಾಹಿರಾತಿನಲ್ಲಿ ಪಾಲ್ಗೊಳ್ಳುವುದು ಕ್ರಿಮಿನಲ್ ಅಪರಾಧಕ್ಕೆ ಸಮಾನವಾದುದು ಎಂದು ಹೇಳಿದ್ದಾರೆ. ಅಲ್ಲದೆ ತಾವು ಕಂದು ಬಣ್ಣದ ಚರ್ಮ ಹೊಂದಿರುವುದು ನನ್ನ ಹೆಮ್ಮೆ ಎಂದು ಬಾಲಿವುಡ್ ನ ಅತಿ ದುಬಾರಿ ನಟಿ 28 ವರ್ಷದ ಕಂಗನಾ ಹೇಳಿಕೊಂಡಿದ್ದಾರೆ.