ಸೆಟ್ಟೇರಲಿದೆ ಮಾಜಿ ಪ್ರಧಾನಿ ಸಿಂಗ್ ಕುರಿತ ಚಿತ್ರ! ಅನಿರೀಕ್ಷಿತವಾಗಿ ಪ್ರಧಾನಿ ಹುದ್ದೆಗೇರಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುರಿತಾದ ಚಿತ್ರ ತಯಾರಿಗೆ ಬಾಲಿವುಡ್ ಮುಂದಾಗಿದ್ದು, ನಿರ್ಮಾಪಕ ಸುನಿಲ್ ಬೋಹ್ರಾ ಮತ್ತು ತಂಡ ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದೆ... ನವದೆಹಲಿ: ಅನಿರೀಕ್ಷಿತವಾಗಿ ಪ್ರಧಾನಿ ಹುದ್ದೆಗೇರಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುರಿತಾದ ಚಿತ್ರ ತಯಾರಿಗೆ ಬಾಲಿವುಡ್ ಮುಂದಾಗಿದ್ದು, ನಿರ್ಮಾಪಕ ಸುನಿಲ್ ಬೋಹ್ರಾ ಮತ್ತು ತಂಡ ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದೆ. ಈ ಹಿಂದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕುರಿತಂತೆ ಸಂಜಯ್ ಬಾರು ಅವರು ಬರೆದಿದ್ದ ‘ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ : ಮೇಕಿಂಗ್ ಆಂಡ್ ಅನ್ ಮೇಕಿಂಗ್ ಆಫ್ ಮನಮೋಹನ್ ಸಿಂಗ್’ ಎಂಬ ಕಾದಂಬರಿ ಆಧಾರಿತ ಚಿತ್ರ ನಿರ್ಮಿಸಲು ಸುನಿಲ್ ಬೋಹ್ರಾ ತಂಡ ಮುಂದಾಗಿದೆ. ಚಿತ್ರದಲ್ಲಿ ಮನಮೋಹನ್ಸಿಂಗ್ ಹೇಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಕೈಗೊಂಬೆಯಾಗಿದ್ದರು. ಸರ್ಕಾರದ ಪ್ರಮುಖ ನಿರ್ಧಾರಗಳಲ್ಲಿ ಅವರ ಪಾತ್ರವೇನಿತ್ತು ಎಂಬ ಅಂಶಗಳು ಚಿತ್ರದಲ್ಲಿರಲಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಸುನಿಲ್ ಬೋಹ್ರಾ ಅವರು, ಚಿತ್ರದ ಸ್ಕ್ರಿಪ್ಟ್ ತಯಾರಿಗಾಗಿಯೇ 6 ತಿಂಗಳ ಕಾಲಾವಕಾಶ ಬೇಕಿದ್ದು, ಪ್ರಸ್ತುತ ಚರ್ಚಾ ಹಂತದಲ್ಲಿಯೇ ಇದ್ದೇವೆ. ಹೀಗಾಗಿ ಮುಂದಿನ ಕಾರ್ಯಗಳ ಕುರಿತು ಚರ್ಚಿಸುತ್ತಿದ್ದೇವೆ ಎಂದು ಹೇಳಿದರು. ಚಿತ್ರತಂಡದ ಮೂಲಗಳ ಪ್ರಕಾರ ಈ ಚಿತ್ರವು 10 ಕ್ಕೂ ಹೆಚ್ಚು ಭಾಷೆಯಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರ ನಿರ್ಮಾಣ ಮಾಡುತ್ತಿರುವ ಸುನಿಲ್ ಬೊಹ್ರಾ ಮತ್ತು ತಂಡ ತಿಳಿಸಿದೆ. ಪುಸ್ತಕ ಬರೆದಿರುವ ಮೂಲ ಕರ್ತೃ ಸಂಜಯ್ ಬಾರು ಮನಮೋಹನ್ ಸಿಂಗ್ ಆಡಳಿತಾವಧಿ 2004 ರಿಂದ 2008 ರವರೆಗೆ ಅವರ ಮಾಧ್ಯಮ ಸಲಹೆಗಾರರಾಗಿದ್ದರು. ಮುಂದಿನ ವರ್ಷಕ್ಕೆ ಚಿತ್ರ ತೆರೆಕಾಣಲಿದೆ ಎಂಬ ನಿರೀಕ್ಷೆಯಿದೆ.