ಕ್ಯಾನೆ ಚಲನಚಿತ್ರೋತ್ಸವದಲ್ಲಿ ಮಿಂಚಿದ ಐಶ್ವರ್ಯಾ ಫ್ರಾನ್ಸ್ ನ ಕ್ಯಾನ್ಸ್ ನಲ್ಲಿ ಮೊನ್ನೆ 11ರಿಂದ ಆರಂಭಗೊಂಡಿರುವ 69ನೇ ಕ್ಯಾನೆ ಅಂತರಾಷ್ಟ್ರೀಯ ಚಿತ್ರೋತ್ಸವ ... ಮುಂಬೈ: ಫ್ರಾನ್ಸ್ ನ ಕ್ಯಾನ್ಸ್ ನಲ್ಲಿ ಮೊನ್ನೆ 11ರಿಂದ ಆರಂಭಗೊಂಡಿರುವ 69ನೇ ಕ್ಯಾನೆ ಅಂತರಾಷ್ಟ್ರೀಯ ಚಿತ್ರೋತ್ಸವ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ವಿಶ್ವದ ಸಮಕಾಲೀನ ಪ್ರಮುಖ ಚಿತ್ರಗಳು ಅಲ್ಲಿ ಪ್ರದರ್ಶನಗೊಳ್ಳುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ವಿಶ್ವದ ಪ್ರಮುಖ ನಟಿಯರು ಅಲ್ಲಿನ ರೆಡ್ ಕಾರ್ಪೆಟ್ ಮೇಲೆ ವಿವಿಧ ವಿನ್ಯಾಸದ ಉಡುಪು ಧರಿಸಿಕೊಂಡು ನಡೆದುಕೊಂಡು ಹೋಗುವುದು, ಅವರ ಸುತ್ತ ನೂರಾರು ಕ್ಯಾಮೆರಾಗಳು ಅದನ್ನು ನೋಡುವುದೇ ಕಣ್ಣಿಗೆ ಹಬ್ಬ. ಕ್ಯಾನೆ ಚಲನಚಿತ್ರೋತ್ಸವದಲ್ಲಿ ನಮ್ಮ ಬಾಲಿವುಡ್ ನ ಹಲವು ನಟಿಯರು ಕೂಡ ಭಾಗವಹಿಸುತ್ತಾರೆ. ಅವರಲ್ಲಿ ಆಕರ್ಷಣೆಯ ಕೇಂದ್ರ ಬಿಂದು ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್. ಸತತ 15 ವರ್ಷಗಳಿಂದ ಕ್ಯಾನೆ ಚಿತ್ರೋತ್ಸವದಲ್ಲಿ ಭಾಗವಹಿಸುತ್ತಾ ಬಂದಿರುವ ಐಶ್ವರ್ಯಾ ನಿನ್ನೆ ಅಲ್ಲಿನ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಕುವೈತ್ ಮೂಲದ ವಿನ್ಯಾಸಕ ಆಲಿ ಯೂನಸ್ ವಿನ್ಯಾಸಗೊಳಿಸಿದ ಚಿನ್ನದ ಬಣ್ಣದ ಗೌನ್ ನಲ್ಲಿ ಲೊ'ರಿಯಲ್ ಪ್ಯಾರಿಸ್ ಕಾಸ್ಮೆಟಿಕ್ಸ್ ನ ಬ್ರಾಂಡ್ ಅಂಬಾಸಿಡರ್ ಆಗಿ ಐಶ್ವರ್ಯಾ ರೈ, ರೆಡ್ ಕಾರ್ಪೆಟ್ ಮೇಲೆ ನಡೆದುಕೊಂಡು ಹೋಗುತ್ತಿದ್ದರೆ ಅಷ್ಟೂ ಕ್ಯಾಮೆರಾಗಳ ಅವರ ಮೇಲೆಯೇ ನೆಟ್ಟಿದ್ದವು. ಹಾಗೆಯೇ ಗಾಳಿಯಲ್ಲಿ ಮುತ್ತನ್ನು ತೇಲಿಬಿಟ್ಟರು. ಇನ್ನಷ್ಟು ಕಂಗೊಳಿಸಲು ತಮ್ಮ ಕಣ್ಣು ರೆಪ್ಪೆಯ ಮೇಲೆ ನೀಲಿ ಶೇಡ್ ನ್ನು ಹಚ್ಚಿದ್ದರು. ಕೂದಲನ್ನು ಮಧ್ಯದಿಂದ ಎರಡು ಭಾಗ ಮಾಡಿ ನೀಳವಾಗಿ ಬಿಟ್ಟಿದ್ದರು. ಹೆಚ್ಚಿನ ಮೇಕಪ್ ಮಾಡಿಕೊಳ್ಳದೆ ಸರಳವಾಗಿ, ಆಕರ್ಷಕವಾಗಿ ಕಾಣುತ್ತಿದ್ದರು. ಐಶ್ವರ್ಯಾ ಅಭಿನಯದ ಹೊಸ ಚಿತ್ರ ಸರಬ್ಜಿತ್ ಇಂದು ಕ್ಯಾನೆ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಇದುವರೆಗೆ ಅನೇಕರು ವಿಶ್ವ ಸುಂದರಿಯರಾಗಿ ಗೆದ್ದು ಹೋಗಿದ್ದಾರೆ. ಆದರೆ ಈಗಲೂ ಐಶ್ವರ್ಯಾ ರೈ ಅವರನ್ನು ವಿಶ್ವದ ಅತ್ಯಂತ ಸುಂದರಿ ಎಂದೇ ಗುರುತಿಸಲಾಗುತ್ತಿದೆ. ಐಶ್ವರ್ಯಾ ಮೊದಲ ಬಾರಿಗೆ ಕ್ಯಾನೆ ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆ ಹಾಕಿದ್ದು 2002ರಲ್ಲಿ ತಮ್ಮ ದೇವದಾಸ್ ಚಿತ್ರದ ಪ್ರದರ್ಶನದ ಸಮಯದಲ್ಲಿ. ಕ್ಯಾನೆ ಚಿತ್ರೋತ್ಸವ ಈ ತಿಂಗಳ 22ರವರೆಗೆ ನಡೆಯಲಿದೆ.