ವಿಚ್ಚೇದನದತ್ತ ಮಲೈಕಾ, ಅರ್ಬಾಜ್ ಜೋಡಿ? ಕತ್ರೀನಾ-ರಣ್ ಬೀರ್ ಕಪೂರ್ ಮತ್ತು ಫರ್ಹಾನ್- ಅಧುನಾ ಜೋಡಿ ಬೇರೆಯಾದ ಬೆನ್ನಲ್ಲೇ ಮತ್ತೊಂದು ಬಾಲಿವುಡ್ ಜೋಡಿ ವಿಚ್ಚೇದನದತ್ತ ಮುಖಮಾಡಿದ್ದಾರೆ ಎಂದು ತಿಳಿದುಬಂದಿದೆ... ಮುಂಬೈ: ಕತ್ರೀನಾ-ರಣ್ ಬೀರ್ ಕಪೂರ್ ಮತ್ತು ಫರ್ಹಾನ್- ಅಧುನಾ ಜೋಡಿ ಬೇರೆಯಾದ ಬೆನ್ನಲ್ಲೇ ಮತ್ತೊಂದು ಬಾಲಿವುಡ್ ಜೋಡಿ ವಿಚ್ಚೇದನದತ್ತ ಮುಖಮಾಡಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಬಾಲಿವುಡ್ ನ ಪ್ರಮುಖ ಕುಟುಂಬಗಳಲ್ಲಿ ಒಂದಾದ ಸಲ್ಮಾನ್ ಖಾನ್ ಕುಟುಂಬದಿಂದಲೇ ಈ ವಿಚ್ಛೇದನ ಸುದ್ದಿ ಹೊರಬಿದ್ದಿರುವುದು ಅಚ್ಚರಿಗೆ ಕಾರಣವಾಗಿದೆ. ಬಾಲಿವುಡ್ ನ ಸ್ಟಾರ್ ಜೋಡಿ ಎಂದೇ ಖ್ಯಾತಿಗಳಿಸಿದ್ದ ನಟ ಅರ್ಬಾಜ್ ಖಾನ್ ಮತ್ತು ನಟಿ ಮಲೈಕಾ ಅರೋರಾ ಅವರು ತಮ್ಮ 17 ವರ್ಷಗಳ ವೈವಾಹಿಕ ಜೀವನಕ್ಕೆ ತೆರೆ ಎಳೆದು ವಿಚ್ಛೇದನದ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಪರಸ್ಪರ ಪ್ರೀತಿಸಿ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ 1998ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಅರ್ಬಾಜ್ ಮತ್ತು ಮಲೈಕಾ ಜೋಡಿ ಸತತ 17 ವರ್ಷಗಳ ಬಳಿಕ ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಬಾಲಿವುಡ್ ಮೂಲಗಳ ಪ್ರಕಾರ ಮಲೈಕಾ ಅವರಿಗೆ ಬ್ರಿಟೀಷ್ ಮೂಲದ ಉದ್ಯಮಿಯೊಂದಿಗೆ ಸ್ನೇಹಸಂಬಂಧವಿದ್ದು, ಇದರಿಂದ ಕೋಪಗೊಂಡಿರುವ ಅರ್ಬಾಜ್ ತಮ್ಮ ವೈವಾಹಿಕ ಜೀವನಕ್ಕೆ ವಿಚ್ಚೇದನದ ಮೂಲಕ ತೆರೆ ಎಳೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ಮಲೈಕಾ ತಮ್ಮ ಪುತ್ರ ಅರ್ಹಾನ್ ನನ್ನು ಕರೆದುಕೊಂಡು ಬಾಂದ್ರಾದಲ್ಲಿರುವ ಮನೆಯಿಂದ ಹೊರಬಂದು ಪ್ರತ್ಯೇಕ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈವರೆಗೂ ಈ ಬಗ್ಗೆ ಸಲ್ಮಾನ್ ಖಾನ್ ಕುಟುಂಬಸ್ಥರು ಯಾವುದೇ ಸ್ಪಷ್ಟನೆ ನೀಡಿಲ್ಲ. ಇತ್ತೀಚೆಗಷ್ಟೇ ಮಲೈಕಾ ಮತ್ತು ಅರ್ಬಾಜ್ ಜೋಡಿ ಸೋನಿ ಟಿವಿ ವಾಹಿನಿಯಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಕೆಲ ಎಪಿಸೋಡ್ ಗಳ ಬಳಿಕ ಅರ್ಬಾಜ್ ಖಾನ್ ಮಾತ್ರ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಆಗಲೇ ಮಲೈಕಾ ಮತ್ತು ಅರ್ಬಾಜ್ ನಡುವೆ ಎಲ್ಲವೂ ಸರಿಯಿಲ್ಲ ಎಂದು ಬಾಲಿವುಡ್ ನಲ್ಲಿ ಗುಸು-ಗುಸು ಶುರುವಾಗಿತ್ತು.