ನನ್ನ ಜಾತ್ಯತೀತತೆಯನ್ನು ಸಾಬೀತುಪಡಿಸುವ ಅವಶ್ಯಕತೆಯಿಲ್ಲ: ಶಾರೂಖ್ ಖಾನ್ ಪ್ರಸ್ತುತ ದೇಶದಲ್ಲಿ ಬಿಸಿಬಿಸಿಯಾಗಿ ಚರ್ಚೆಯಲ್ಲಿರುವ ಅಸಹಿಷ್ಣುತೆ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ನಂತರ ಕೇಳಿಬಂದಿರುವ... ಮುಂಬೈ: ಪ್ರಸ್ತುತ ದೇಶದಲ್ಲಿ ಬಿಸಿಬಿಸಿಯಾಗಿ ಚರ್ಚೆಯಲ್ಲಿರುವ ಅಸಹಿಷ್ಣುತೆ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ನಂತರ ಕೇಳಿಬಂದಿರುವ ಅಭಿಪ್ರಾಯಗಳ ಬಗ್ಗೆ ಸಿಟ್ಟಿಗೆದ್ದಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್, ತಮ್ಮ ಜಾತ್ಯತೀತತೆ ಬಗ್ಗೆ ಸಾಬೀತುಪಡಿಸುವ ಅಗತ್ಯ ತಮಗಿಲ್ಲ ಎಂದು ಹೇಳಿದ್ದಾರೆ. ಅಸಹುಷ್ಣುತೆ ಕುರಿತು ನಡೆಯುತ್ತಿರುವ ಚರ್ಚೆ ಕುರಿತು ಚಾನೆಲ್ ವೊಂದರ ಸಂದರ್ಶನದ ವೇಳೆ ಮಾತನಾಡಿದ ಅವರು, ನನಗೆ ನಿಜವಾಗಿಯೂ ಈ ಬಗ್ಗೆ ಏನೂ ತಿಳಿದಿಲ್ಲ. ನಾನು ನೇರವಾಗಿ, ಸ್ಪಷ್ಟವಾಗಿ ಮತ್ತು ಒಳ್ಳೆಯದನ್ನೇ ಯಾವತ್ತೂ ಮಾತನಾಡುತ್ತೇನೆ. ನಾನು ಜಾತ್ಯತೀತ ಎಂದು ಸಾಬೀತುಪಡಿಸುವ ಅಗತ್ಯ ನನಗಿಲ್ಲ ಎಂದು ಹೇಳಿದರು. ನಾವು ಜೀವನದಲ್ಲಿ ಮುಂದೆ ಬರಬೇಕೆಂದರೆ ನಾವು ಜಾತಿ, ಲಿಂಗ, ಬಣ್ಣ, ವರ್ಗ ತಾರತಮ್ಯದಂತಹ ವಿಚಾರಗಳನ್ನು ನಮ್ಮ ಮನಸ್ಸಿನಿಂದ ಕಿತ್ತುಹಾಕಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶಾರೂಖ್ ಖಾನ್ ಅವರು ಅಸಹಿಷ್ಣುತೆ ಬಗ್ಗೆ ನೀಡಿದ್ದ ಅಭಿಪ್ರಾಯಕ್ಕೆ ಸಮಾಜದ ಕೆಲ ವರ್ಗಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಬಿಜೆಪಿ ಸಂಸದ ಯೋಗಿ ಆದಿತ್ಯನಾಥ ಅವರು ಶಾರೂಖ್ ನನ್ನು ಪಾಕಿಸ್ತಾನಿ ಭಯೋತ್ಪಾದಕ ಹಫೀಜ್ ಸಯೀದ್ ಅವರಿಗೆ ಹೋಲಿಸಿದರೆ, ಹಿಂದುತ್ವ ಪ್ರತಿಪಾದಕ ಸಾದ್ವಿ ಪ್ರಾಚಿ ಪಾಕಿಸ್ತಾನದ ಏಜೆಂಟ್ ಎಂದು ಕರೆದಿದ್ದರು. ಸೂಪರ್ ಸ್ಟಾರ್ ಅಮೀರ್ ಖಾನ್ ಕೂಡ ತನ್ನ ಪತ್ನಿ ದೇಶ ಬಿಟ್ಟು ಹೋಗೋಣವೇ ಅಂತ ಹೇಳುತ್ತಿದ್ದಾಳೆ ಎಂದು ಹೇಳಿದ್ದಕ್ಕೆ ಇಂತಹದ್ದೇ ಟೀಕೆಯನ್ನು ಎದುರಿಸಬೇಕಾಗಿ ಬಂತು. ಶಾರೂಖ್ ಹೇಳಿಕೆಯನ್ನು ಸಾದ್ವಿ ಪ್ರಾಚಿ ಮತ್ತೆ ಪ್ರಸ್ತಾಪಿಸಿದ್ದು, ಇಂತಹ ಹೇಳಿಕೆಗಳು ನಮ್ಮ ದೇಶದ ಬಗ್ಗೆ ಬೇರೆಯವರಿಗೆ ಕೆಟ್ಟ ಭಾವನೆಯನ್ನು ಹುಟ್ಟುಹಾಕುತ್ತದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾರೂಖ್ ಖಾನ್, ಇಂತಹ ವಿವಾದಗಳಿಗೆ ಕೊನೆಯೇ ಇಲ್ಲ. ಅದಕ್ಕಾಗಿ ವಿವಾದ ಹುಟ್ಟುಹಾಕುವ ವಿಷಯಗಳ ಕುರಿತು ಮಾತನಾಡದೆ ತಮ್ಮ ಸಿನಿಮಾ ಮತ್ತು ನಟನೆ ಬಗ್ಗೆ ಮಾತ್ರ ಮಾತನಾಡಬೇಕೆಂದಿದ್ದೇನೆ ಎಂದು ಹೇಳಿದ್ದಾರೆ. ನಾನು ಭಾರೀ ದೊಡ್ಡ ದೇಶಪ್ರೇಮಿ ಅಂತ ಕೆಲವರು ಹೇಳುತ್ತಾರೆ. ಆದರೆ ಯಾವ ದೃಷ್ಟಿಕೋನದಿಂದ ಅವರು ಹಾಗೆ ಹೇಳುತ್ತಾರೆ? ಪ್ರತಿಯೊಬ್ಬರೂ ದೇಶಪ್ರೇಮಿಯಾಗಿರುತ್ತಾರೆ ಎಂದು ಹೇಳಿರುವ ಶಾರೂಖ್ ಮೋದಿ ನೇತೃತ್ವದ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದ್ದಾರೆ.