ರಾಷ್ಟ್ರಧ್ವಜ-ರಾಷ್ಟ್ರಗೀತೆ ಇಲ್ಲದೇ "ದಂಗಲ್" ರಿಲೀಸ್ ಮಾಡುವುದಿಲ್ಲ: ಪಾಕ್ ಗೆ ಅಮೀರ್ ಖಾನ್ ಖಡಕ್ ಹೇಳಿಕೆ ದಂಗಲ್ ಚಿತ್ರದ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಗೆ ಕತ್ತರಿ ಹಾಕಿದರೆ ಪಾಕಿಸ್ತಾನದಲ್ಲಿ ಚಿತ್ರವನ್ನೇ ರಿಲೀಸ್ ಮಾಡುವುದಿಲ್ಲ ಎಂದು ಹೇಳುವ ಮೂಲಕ ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ದೇಶ ಪ್ರೇಮ ಮೆರೆದಿದ್ದಾರೆ. ಮುಂಬೈ: ದಂಗಲ್ ಚಿತ್ರದ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಗೆ ಕತ್ತರಿ ಹಾಕಿದರೆ ಪಾಕಿಸ್ತಾನದಲ್ಲಿ ಚಿತ್ರವನ್ನೇ ರಿಲೀಸ್ ಮಾಡುವುದಿಲ್ಲ ಎಂದು ಹೇಳುವ ಮೂಲಕ ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ದೇಶ ಪ್ರೇಮ ಮೆರೆದಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಬಿಡುಗಡೆಯಾಗಿ ಬಾಕ್ಸ್ ಕೊಳ್ಳೆ ಹೊಡೆದಿದ್ದ ಅಮೀರ್ ಖಾನ್ ನಟನೆಯ ದಂಗಲ್ ಚಿತ್ರ ಪಾಕಿಸ್ತಾನದಲ್ಲೂ ತೆರೆಕಾಣಬೇಕಿತ್ತು. ಆದರೆ ಅಲ್ಲಿನ ಸೆನ್ಸಾರ್ ಮಂಡಳಿಯ ಕೆಲ ಷರತ್ತುಗಳಿಂದಾಗಿ ದಂಗಲ್ ಚಿತ್ರ ಪಾಕಿಸ್ತಾನದಲ್ಲಿ ತೆರೆಕಾಣುತ್ತಿಲ್ಲ. ಭಾರತದ ರಾಷ್ಟ್ರಗೀತೆ ಹಾಗೂ ಭಾರತೀಯ ಧ್ವಜ ಪ್ರದರ್ಶನ ಇರುವ ದೃಶ್ಯಕ್ಕೆ ಕತ್ತರಿ ಹಾಕಿದಲ್ಲಿ ಮಾತ್ರ ಪಾಕಿಸ್ತಾನದಲ್ಲಿ ದಂಗಲ್ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಾಗಿ ಅಲ್ಲಿನ ಸೆನ್ಸಾರ್ ಮಂಡಳಿ ವಿಧಿಸಿದ್ದ ಷರತ್ತನ್ನು ಬಾಲಿವುಡ್ ನಟ, ನಿರ್ಮಾಪಕ ಆಮಿರ್ ಖಾನ್ ನಿರಾಕರಿಸಿದ್ದಾರೆ. ಚಿತ್ರದ ಎರಡು ದೃಶ್ಯ ಹೊರತುಪಡಿಸಿ ಪಾಕಿಸ್ತಾನಿ ಸೆನ್ಸಾರ್ ಮಂಡಳಿ ಒಪ್ಪಿಗೆ ನೀಡಿತ್ತು. ಒಂದು ದೃಶ್ಯದಲ್ಲಿ ಭಾರತದ ತ್ರಿವರ್ಣ ಧ್ವಜ ಪ್ರದರ್ಶಿಸಲಾಗಿದ್ದರೆ, ಮತ್ತೊಂದು ದೃಶ್ಯದಲ್ಲಿ ಗೀತಾ ಫೊಗಟ್ ಚಿನ್ನದ ಪದಕ ಗೆದ್ದ ಬಳಿಕ ಭಾರತದ ರಾಷ್ಟ್ರಗೀತೆ ನುಡಿಸಲಾಗಿತ್ತು. ಈ ಎರಡು ದೃಶ್ಯಗಳನ್ನು ಕಿತ್ತುಹಾಕುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ. ಆದರೆ ಇದಕ್ಕೆ ಆಮಿರ್ ಖಾನ್ ನಿರಾಕರಿಸಿದ್ದು, ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜದ ಸೀನ್ ಗಳಿಗೆ ಕತ್ತರಿ ಹಾಕಿದರೆ ಪಾಕಿಸ್ತಾನದಲ್ಲಿ ಚಿತ್ರವನ್ನೇ ಬಿಡುಗಡೆ ಮಾಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. "ಚಿತ್ರದಲ್ಲಿ ಪಾಕಿಸ್ತಾನದ ಬಗ್ಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವ ಉಲ್ಲೇಖವೂ ಇಲ್ಲ. ಈ ಚಿತ್ರ ಸಂಪೂರ್ಣವಾಗಿ ಕ್ರೀಡಾ ವ್ಯಕ್ತಿ ಚಿತ್ರವಾಗಿದ್ದು, ಯಾವುದೇ ಕಾರಣಕ್ಕೆ ರಾಷ್ಟ್ರಗೀತೆ ದೃಶ್ಯ ಕಿತ್ತುಹಾಕಲು ಒಪ್ಪಿಗೆ ನೀಡುವುದಿಲ್ಲ ಎಂದು ಅಮೀರ್ ಖಾನ್ ಹೇಳಿದ್ದಾರೆ. ಕಳೆದ ವರ್ಷ ಉರಿ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹಳಸಿ ಹೋದ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಕಲಾವಿದರನ್ನು ಭಾರತೀಯ ಚಿತ್ರರಂಗದಿಂದ ನಿಷೇಧಿಸುವ ನಿರ್ಧಾರವನ್ನು ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ ಕೈಗೊಂಡಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಥಿಯೇಟರ್ ಮಾಲೀಕರು ಕೂಡ ತಾತ್ಕಾಲಿಕವಾಗಿ ಭಾರತೀಯ ಚಿತ್ರಗಳನ್ನು ಪಾಕಿಸ್ತಾನದಲ್ಲಿ ಪ್ರದರ್ಶಿಸುವುದನ್ನು ನಿಷೇಧಿಸಿದ್ದರು. ಆದರೆ ಈ ವರ್ಷಾರಂಭದಲ್ಲಿ ಪಾಕಿಸ್ತಾನ ಈ ನಿಷೇಧವನ್ನು ರದ್ದುಪಡಿಸಿ, ಭಾರತೀಯ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಇತ್ತೀಚೆಗೆ ಪಾಕಿಸ್ತಾನದ ಕೆಲ ಸ್ಥಳೀಯ ವಿತರಕರು "ದಂಗಲ್" ಚಿತ್ರವನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡಬೇಕು ಎಂದು ಕೋರಿದ್ದ ಹಿನ್ನೆಲೆಯಲ್ಲಿ ಅದಕ್ಕೆ ಆಮಿರ್ ಖಾನ್ ಸಮ್ಮತಿ ಸೂಚಿಸಿದ್ದರು.