ಮಾಧುರಿಗೆ ಬೆದರಿಕೆ ಸಂದೇಶ ಕಳಿಸಿದ ಯುವಕನ ಬಂಧನ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್‌ಗೆ ಬೆದರಿಕೆ ಸಂದೇಶಗಳನ್ನು ಕಳಿಸಿ ಹಣಕ್ಕಾಗಿ ಪೀಡಿಸುತ್ತಿದ್ದ ... ಮುಂಬೈ: ಬಾಲಿವುಡ್ ನಟಿ ಮಾಧುರಿ ದೀಕ್ಷಿತ್‌ಗೆ ಬೆದರಿಕೆ ಸಂದೇಶಗಳನ್ನು ಕಳಿಸಿ ಹಣಕ್ಕಾಗಿ ಪೀಡಿಸುತ್ತಿದ್ದ 23ರ ಹರೆಯದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಹೋಟೆಲ್‌ವೊಂದರಲ್ಲಿ ಪರಿಚಾರಕನಾಗಿರುವ ಪ್ರವೀಣ್ ಕುಮಾರ್ ಪ್ರಧಾನ್ ಎಂಬಾತ ತನಗೆ ಭೂಗತಲೋಕದೊಂದಿಗೆ ಸಂಪರ್ಕವಿರುವುದಾಗಿ ಹೇಳಿಕೊಂಡಿದ್ದು, ಮಾಧುರಿಗೆ ಸಂದೇಶ ಕಳುಹಿಸಿ ಆಕೆಯನ್ನು ಮತ್ತು ಆಕೆಯ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಸಿದ್ದ. ಈ ಬಗ್ಗೆ ಮಾಧುರಿ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ನಿನ್ನೆ ಈತನನ್ನು ಬಂಧಿಸಿ, ಮೊಬೈಲ್ ಫೋನ್‌ನ್ನು ವಶ ಪಡಿಸಿದ್ದಾರೆ. ಬಂಧಿತ ಯುವಕನ್ನು ಶುಕ್ರವಾರ ಕೋರ್ಟ್‌ಗೆ ಹಾಜರು ಪಡಿಸಿದ್ದು, ನಾಳೆಯವರೆಗೆ ಪೊಲೀಸ್ ವಶದಲ್ಲೇ ಇರಿಸುವಂತೆ ಕೋರ್ಟ್ ಆದೇಶಿಸಿರುವುದಾಗಿ ಬಾಂದ್ರಾ ಸಬರ್ಬನ್ ಸೈಬರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸುನಿಲ್ ಗೋಸಾಲ್ಕರ್ ಹೇಳಿದ್ದಾರೆ. ಮಾಧುರಿಗೆ ಕಳಿಸಿದ ಸಂದೇಶವೊಂದರಲ್ಲಿ ಪ್ರಧಾನ್, ತಾನು ಭೂಗತಲೋಕದ ಡಾನ್ ಛೋಟಾ ರಾಜನ್‌ರ ಗ್ಯಾಂಗ್‌ನವನು ಎಂದಿದ್ದಾನೆ. ತಾನು ಸಶಸ್ತ್ರಧಾರಿಯಾದ 15ರ ಹರೆಯದ ಹುಡುಗನೊಬ್ಬನನ್ನು ನಿಮ್ಮ ಮನೆಗೆ ಕಳುಹಿಸುತ್ತಿದ್ದು, ಅವನ ಕೈಯಲ್ಲಿ ನಾ ಕೇಳಿದಷ್ಟು ಮೊತ್ತವನ್ನು ಕೊಟ್ಟು ಬಿಡಿ ಎಂದಿದ್ದನು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದಾಗ ಪ್ರಧಾನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.