ಲಡಾಖ್ ನಲ್ಲಿ ವಿಶ್ವದ ಅತಿ ಎತ್ತರದ ಮೊದಲ ಮೊಬೈಲ್ ಥಿಯೇಟರ್; ನಟ ಅಕ್ಷಯ್ ಗೆ ಗೌರವ! ಭಾರತದ ಲಡಾಖ್ ನಲ್ಲಿ ವಿಶ್ವದ ಅತಿ ಎತ್ತರದ ಮೊಬೈಲ್ ಥಿಯೇಟರ್ ಆರಂಭಗೊಂಡಿದೆ. ಮುಂಬೈ: ಭಾರತದ ಲಡಾಖ್ ನಲ್ಲಿ ವಿಶ್ವದ ಅತಿ ಎತ್ತರದ ಮೊಬೈಲ್ ಥಿಯೇಟರ್ ಆರಂಭಗೊಂಡಿದೆ. ಸಮುದ್ರ ಮಟ್ಟದಿಂದ ಸುಮಾರು 11,562 ಅಡಿ ಎತ್ತರದಲ್ಲಿ ಕಡಿಮೆ ವೆಚ್ಚದಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಒಳಗೊಂಡ ಈ ಮೊಬೈಲ್ ಥಿಯೇಟರ್ ಅನ್ನು ನಿರ್ಮಿಸಲಾಗಿದೆ. ದೂರದ ಕುಗ್ರಾಮಗಳ ಜನರೂ ಸಹ ಸಿನಿಮಾಗಳಿಗೆ ಹತ್ತಿರವಾಗಬೇಕು ಎಂಬ ಉದ್ದೇಶದಿಂದ ಚಿತ್ರಮಂದಿರವನ್ನು ಸೇವೆಗೆ ಲಭ್ಯವಾಗಿಸಿರುವೆ ಎಂದು ಪಿಕ್ಚರ್‌ ಟೈಮ್‌ ಸ್ಥಾಪಕ, ಸಿಇಒ ಸುಶೀಲ್‌ ಹೇಳಿದ್ದಾರೆ.ಬಾಲಿವುಡ್‌ ಕಿಲಾಡಿ ಅಕ್ಷಯ್ ಕುಮಾರ್ ಅಭಿನಯದ 'ಬೆಲ್‌ ಬಾಟಮ್‌' ಚಿತ್ರವನ್ನು ಈ ಥಿಯೇಟರ್‌ ನಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ಈ ವಿಷಯವನ್ನು ಅಕ್ಷಯ್ ಕುಮಾರ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.ಲಡಾಖ್‌ನ ಲೇಹ್‌ನಲ್ಲಿ ಸ್ಥಾಪಿಸಲಾಗಿರುವ ವಿಶ್ವದ ಅತಿ ಎತ್ತರದ ಮೊಬೈಲ್ ಥಿಯೇಟರ್‌ನಲ್ಲಿ 'ಬೆಲ್ ಬಾಟಮ್' ಚಲನಚಿತ್ರವನ್ನು ಪ್ರದರ್ಶಿಸುವುದು ನನಗೆ ದೊರೆತ ಗೌರವ ಎಂದು ಭಾವಿಸಿದ್ದೇನೆ. ಇದರಿಂದ ನನ್ನ ಮನಸ್ಸು ಆನಂದಗೊಂಡಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಚಿತ್ರ ಆಕ್ಷನ್ ಥ್ರಿಲ್ಲರ್ ಆಗಿದ್ದು ಇದನ್ನು ರಂಜಿತ್ ಎಂ. ತಿವಾರಿ ನಿರ್ದೇಶಿಸಿದ್ದಾರೆ. ವಾಣಿ ಕಪೂರ್, ಲಾರಾ ದತ್ತಾ ಪ್ರಮುಖ ಪಾತ್ರ ಪೋಷಿಸಿದ್ದಾರೆ. ಹಲವಾರು ಬಾರಿ ವಿಳಂಬಗೊಂಡು ನಂತರ ಬಿಡುಗಡೆಗೊಂಡ ಈ ಚಿತ್ರ ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.