ಸನ್ನಿಲಿಯೋನ್ ಗೆ ವೃತ್ತಿಪರತೆಯೇ ಇಲ್ಲ: ನಿರ್ದೇಶಕ ರಾಜೀವ್ ಚೌದರಿ ಕಿಡಿ ನಟಿ ಸನ್ನಿಲಿಯೋನ್ ಗೆ ವೃತ್ತಿಪರತೆಯೇ ಇಲ್ಲ ಎಂದು ಬಾಲಿವುಡ್ ನಿರ್ದೇಶಕ ರಾಜೀವ್ ಚೌದರಿ ಕಿಡಿಕಾರಿದ್ದಾರೆ. ಮುಂಬೈ: ನಟಿ ಸನ್ನಿಲಿಯೋನ್ ಗೆ ವೃತ್ತಿಪರತೆಯೇ ಇಲ್ಲ ಎಂದು ಬಾಲಿವುಡ್ ನಿರ್ದೇಶಕ ರಾಜೀವ್ ಚೌದರಿ ಕಿಡಿಕಾರಿದ್ದಾರೆ. ತಮ್ಮ ನಿರ್ದೇಶನದ ಬೆಯಿಮಾನ್ ಚಿತ್ರ ಫ್ಲಾಪ್ ಲಿಸ್ಟ್ ಗೆ ಸೇರ್ಪಡೆಯಾಗುತ್ತಿದ್ದಂತೆಯೇ ಚಿತ್ರತಂಡದ ಭಿನ್ನಮತ ಸ್ಫೋಟಗೊಂಡಿದ್ದು, ಚಿತ್ರದ ಸೋಲಿಗೆ ನಟಿ ಸನ್ನಿ ಲಿಯೋನ್ ಕಾರಣ ಎಂದು ನಿರ್ದೇಶಕ ರಾಜೀವ್ ಚೌದರಿ ಪರೋಕ್ಷವಾಗಿ ಆರೋಪಿಸಿದ್ದಾರೆ. ಚಿತ್ರದ ಕುರಿತು ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜೀವ್ ಚೌದರಿ ಅವರು,"ನಟಿ ಸನ್ನಿ ಲಿಯೋನ್ ಗೆ ವೃತ್ತಿಪರತೆಯೇ ಇಲ್ಲ. ನಮ್ಮ ತಾಳ್ಮೆಯಿಂದಷ್ಟೇ ಬೆಯಿಮಾನ್ ಚಿತ್ರ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ. "ನಿಜವಾಗಿಯೂ ಹೇಳುತ್ತೇನೆ ನಟಿ ಸನ್ನಿಲಿಯೋನ್ ಗೆ ವೃತ್ತಿಪರತೆಯೇ ಇಲ್ಲ. ತಾವು ಮಾಡುವ ಕೆಲಸದ ಕುರಿತು ಪ್ರೀತಿಯಾಗಲೀ ಅಥವಾ ಅದರ ಕುರಿತ ಕಾಳಜಿಯಾಗಲೀ ಅವರಿಗಿಲ್ಲ. ನನ್ನದೇ ಉದಾಹರಣೆ ಹೇಳಬೇಕು ಎಂದರೆ ಬೆಯಿಮಾನ್ ಚಿತ್ರ ನಿರ್ಮಾಣ ಶುರುವಾಗಿದ್ದೇ 2014ರಲ್ಲಿ. ಅಂದು ಅವರ ಡೇಟ್ಸ್ ಕೇಳಿದಾಗ ಒಂದು ವರ್ಷದ ಬಳಿಕ ಅವರು ಡೇಟ್ಸ್ ಕೊಟ್ಟರು. ಬಳಿಕ ಚಿತ್ರೀಕರಣ ಪ್ರಾರಂಭವಾದರೂ ಚಿತ್ರೀಕರಣಕ್ಕೆ ಸನ್ನಿ ಸರಿಯಾಗಿ ಬರುತ್ತಿರಲಿಲ್ಲ. ಚಿತ್ರೀಕರಣದ ಸಮಯದಲ್ಲೇ ಖಾಸಗಿ ಕಾರ್ಯಕ್ರಮಗಳಿಗೆ ಅಥವಾ ರಿಯಾಲಿಟಿ ಶೋಗಳಿಗೆ ತೆರಳುತ್ತಿದ್ದರು. ಇಂತಹ ಅದೆಷ್ಟೇ ಪರಿಸ್ಥಿತಿಗಳಿದ್ದು, ಇವುಗಳನ್ನೆಲ್ಲಾ ಸಹಿಸಿಕೊಂಡು ನಾನು ಚಿತ್ರೀಕರಣ ಮುಂದುವರೆಸಿದೆವು. ಚಿತ್ರೀಕರಣ ಪೂರ್ಣಗೊಂಡ ಬಳಿಕವೂ ಸನ್ನಿ ಚಿತ್ರದ ಪ್ರಚಾರಕ್ಕೆ ಸರಿಯಾಗಿ ಆಗಮಿಸುತ್ತಿರಲಿಲ್ಲ. ಹೀಗಾಗಿ ಚಿತ್ರದ ಪ್ರಚಾರ ನಮ್ಮ ಅಂದಾಜಿನಂತೆ ಆಗಲೇ ಇಲ್ಲ ಎಂದು ರಾಜೀವ್ ಚೌದರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜೀವ್ ಚೌದರಿ ನಿರ್ದೇಶಿಸಿರುವ ಬೆಯಿಮಾನ್ ಚಿತ್ರದಲ್ಲಿ ಸನ್ನಿ ಲಿಯೋನ್ ನಾಯಕ ನಟಿಯಾಗಿ ಅಭಿನಯಿಸಿದ್ದು, ಚಿತ್ರ ಕಳೆದ ಶುಕ್ರವಾರವಷ್ಟೇ ತೆರೆಕಂಡಿತ್ತು. ಆದರೆ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಅಷ್ಟಕಷ್ಟೇ ಎಂಬ ಮಾತುಗಳು ಹೊರ ಬೀಳುತ್ತಿದ್ದು, ಚಿತ್ರದ ಕುರಿತ ವಿಮರ್ಶೆಗಳೂ ಕೂಡ ಕೆಟ್ಟ ಚಿತ್ರವೆಂದು ಬಣ್ಣಿಸಿದ್ದವು. ಈ ಹಿಂದೆ ಇದೇ ಚಿತ್ರದ ಕುರಿತ ಸುದ್ದಿಗೋಷ್ಠಿಯಲ್ಲಿ ನಟಿ ಸನ್ನಿ ಲಿಯೋನ್ ರನ್ನು ಹೊಗಳಿ ಅಟ್ಟಕ್ಕೇರಿಸಿದ್ದ ನಿರ್ದೇಶಕ ರಾಜೀವ್ ಚೌದರಿ, ಸನ್ನಿಗೆ ನಾಯಕ ನಟಿಯಾಗುವ ಎಲ್ಲ ಅರ್ಹತೆಗಳೂ ಇವೆ. ಅವರನ್ನು ಉತ್ತಮ ನಾಯಕ ನಟಿಯಾಗಿ ನಾನು ಮಾಡಿತೋರಿಸುವೆ ಎಂದು ಹೇಳಿದ್ದರು. ಆದರೆ ಬೆಯಿಮಾನ್ ಚಿತ್ರ ಫ್ಲಾಪ್ ಪಟ್ಟಿಗೆ ಸೇರುತ್ತಿದ್ದಂತೆಯೇ ಅದರ ವೈಫಲ್ಯವನ್ನು ನಟಿಯ ತಲೆಗೆ ಕಟ್ಟಲು ಮುಂದಾಗಿದ್ದಾರೆ. ಈ ಹಿಂದೆಯೂ ಕೂಡ ಚಿತ್ರದ ಅಶ್ಲೀಲ ದೃಶ್ಯಗಳಿಗೆ ಕತ್ತರಿ ಹಾಕುವ ಸಂಬಂಧ ತಗಾದೆ ತೆಗೆದಿದ್ದ ನಿರ್ದೇಶಕ ರಾಜೀವ್ ಚೌದರಿ ವಿವಾದಕ್ಕೀಡಾಗಿದ್ದರು. ಇದೀಗ ಸನ್ನಿ ವಿರುದ್ಧ ವಾಗ್ದಾಳಿ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.