ಅಫೇರ್ ಆ್ಯಂಡ್ ಲವ್ಲಿ ವಿರಾಟ್ ಅನುಷ್ಕಾಳ ಪ್ರೇಮ ಸಂಬಂಧ ಯಾವತ್ತೋ ಫಿಕ್ಸ್ ಆಗಿದೆ... ವಿರಾಟ್ ಅನುಷ್ಕಾಳ ಪ್ರೇಮ ಸಂಬಂಧ ಯಾವತ್ತೋ ಫಿಕ್ಸ್ ಆಗಿದೆ. ಅಧಿಕೃತವಾಗಿರುವುದು ಮೊನ್ನೆಯಷ್ಟೇ. ವರ್ಲ್ಡ್‌ಕಪ್ ಮುಗಿಯುವವರೆಗೂ ಈ ಸಂಬಂಧ ಹೀಗೆಯೇ ಮರೆಯಲ್ಲಿರುತ್ತದಂತೆ... 'ರಬ್ ನೆ ಬನಾದಿ ಜೋಡಿ'ಯ ಆಡಿಷನ್ ಸಮಯ. ನಿರ್ದೇಶಕ ಮೋಹಿತ್ ಸೂರಿ ಅನುಷ್ಕಾಳತ್ತ ತಿರುಗಿ, 'ನೀನೇನು ಅಷ್ಟು ಸುಂದರಿಯಲ್ಲ. ಆದರೆ ಟ್ಯಾಲೆಂಟ್ ಇದೆ ಎಂಬ ಕಾರಣಕ್ಕೆ ಆಯ್ಕೆ ಮಾಡುತ್ತಿದ್ದೇನೆ ಎಂದರು. ಅವರ ಎಣಿಕೆಗೆ ಅನುಷ್ಕಾ ಶರ್ಮಾ ಮೋಸ ಮಾಡಲಿಲ್ಲ. ಅಲ್ಲಿಂದ ಶುರುವಾದ ಅವಳ ಆ್ಯಕ್ಟಿಂಗ್ ಜರ್ನಿ ಇನ್ನೂ ಮೂರು ವರ್ಷ ಪೂರೈಸುವಲ್ಲಿದೆ. ಆದರೆ ಅನುಷ್ಕಾ ಮಾತ್ರ 19 ಬಾರಿ ವಿವಿಧ ಅವಾರ್ಡ್‌ಗಳಿಗೆ ನಾಮಿನೇಟ್ ಆಗಿ ಅದರಲ್ಲಿ 10 ಅವಾರ್ಡ್‌ಗಳನ್ನು ಭರ್ಜರಿ ಬೇಟೆಯಾಡಿದ್ದಾಳೆ. ಅವಾರ್ಡ್‌ಗಳಷ್ಟೇ ಅಲ್ಲ, ಅನುಷ್ಕಾಳ ಇತ್ತೀಚೆಗೆ ಬೇಟೆಗೆ ಬಲೆಗೆ ಬಿದ್ದದ್ದು ಕ್ರಿಕೆಟಿಗ ವಿರಾಟ್ ಕೊಹ್ಲಿ. ಅನುಷ್ಕಾಳ ಮನೆಯ ಬಳಿ, ಏರ್‌ಪೋರ್ಟ್‌ನಲ್ಲಿ, ನ್ಯೂಜಿಲೆಂಡ್‌ನಲ್ಲಿ ಎಲ್ಲೆಲ್ಲೂ ಇಬ್ಬರೂ ಓಡಾಡುತ್ತಿದ್ದಾರೆ ಎಂಬುದು ಹಾಟ್‌ನ್ಯೂಸ್ ಆಗತೊಡಗಿದ್ದೇ ತಡ, ಕೊಹ್ಲಿ ಕ್ರಿಕೆಟ್‌ನಲ್ಲಿ ಭರ್ಜರಿ ಬ್ಯಾಟ್ ಮಾಡಿದಷ್ಟು ಮಾಧ್ಯಮಗಳಲ್ಲಿ ಅನುಷ್ಕಾ ಮಿಂಚತೊಡಗಿದಳು. ಮೊನ್ನೆ ತಾನೇ ವಿರಾಟ್ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದ್ದಾನೆ. ಹೌದು, 'ಡೇಟಿಂಗ್ ಮಾಡುತ್ತಿದ್ದೇವೆ. ಆದರಿದು ನಮ್ಮ ಪ್ರೈವೇಟ್ ವಿಷಯ. ಬಿಟ್ಟುಬಿಡ್ರಪ್ಪಾ ನಮ್ಮನ್ನು ನಮ್ಮ ಪಾಡಿಗೆ' ಎಂದು ಕೊಹ್ಲಿ ಗೋಗರೆದರೆ, ಅನುಷ್ಕಾ ಮಾತ್ರ ಬೋಲ್ಡ್ ಆಗಿ, 'ನನ್ನ ಜೀವನವೇ ತೆರೆದ ಪುಸ್ತಕ. ಅಲ್ಲಿ ಮುಚ್ಚಿಡುವುದು ಯಾವುದೂ ಇಲ್ಲ. ಹಾಗಂತ ಎಲ್ಲವನ್ನೂ ಮೇಲೆ ನಿಂತು ಕೂಗಿ ಹೇಳಬೇಕಾಗಿಲ್ಲ. ನೋಡುವವರಿಗೆ ಕಣ್ಣಿದೆ, ಬೇಕಾದಂತೆ ಅರ್ಥೈಸಿಕೊಳ್ಳಬಹುದು. ನನ್ನ ಎಲ್ಲ ಸಂಬಂಧಗಳೂ ಶುದ್ಧವಾಗಿರುತ್ತವೆ. ಅದನ್ನು ಹೇಳಿಕೊಂಡು ಸಾಧಿಸಬೇಕಿಲ್ಲ' ಎಂದು ಮಾಧ್ಯಮಗಳಿಗೆ ಮುಖಕ್ಕೆ ಹೊಡೆದಂತೆ ಹೇಳಿ ವಿರಾಟ್ ಜೊತೆ ಬಿಂದಾಸ್ ಆಗಿ ಡೇಟಿಂಗ್‌ನಲ್ಲಿ ತೊಡಗಿದ್ದಾಳೆ. ಅಷ್ಟೇ ಅಲ್ಲ, ಈಗಾಗಲೇ ಜಾಹೀರಾತೊಂದರಲ್ಲಿ ಇಬ್ಬರೂ ಒಟ್ಟಿಗೇ ಮಾಡಿದ್ದು, ಮುಂದೆ ವಿಷಯ ಮಾತುಕತೆಯ ಹಂತದಲ್ಲಿದೆ. ಕ್ರಿಕೆಟ್‌ಗೆ ಸಂಬಂಧಿಸಿದ ಈ ಚಿತ್ರಕತೆಯಲ್ಲಿ ಈ ಜೋಡಿ ಅಭಿನಯಿಸಬೇಕೆಂಬುದು ನಿರ್ಮಾಪಕ ಆದಿತ್ಯ ಛೋಪ್ರಾ ಆಶಯ. ಏಪ್ರಿಲ್‌ನಲ್ಲಿ ತನ್ನ ನಿರ್ಧಾರ ತಿಳಿಸುವುದಾಗಿ ಕೊಹ್ಲಿ ಹೇಳಿದ್ದಾನೆ. ಮೊದಲ ಚಿತ್ರ 'ರಬ್ ನೆ ಬನಾದಿ ಜೋಡಿ'ಯಿಂದ ಹಿಡಿದು ಈ ವರೆಗೆ ನಟಿಸಿದ್ದರೆಲ್ಲ ಸೈ ಎನಿಸಿಕೊಂಡಿರುವ ಈ ಬೆಡಗಿ, ಸದ್ಯ 'ಬಾಂಬೆ ವೆಲ್ವೆಟ್‌' ನಲ್ಲಿ ರಣಬೀರ್ ಜೊತೆ ಹಾಗೂ ಡಿಸೆಂಬರ್‌ನಲ್ಲಿ ತೆರೆ ಕಾಣಲಿರುವ 'ಪಿಕೆ' ಯಲ್ಲಿ ಅಮೀರ್‌ಖಾನ್ ಜೊತೆ ನಟಿಸಿದ್ದಾಳೆ. ಈ ವರ್ಷದ ಬ್ಲಾಕ್‌ಬಸ್ಟರ್ ಆಗಲಿರುವ ಚಿತ್ರ ಎಂದೇ ಹೇಳುತ್ತಿರುವ 'ಪಿಕೆ' ಯಲ್ಲಿ ಹಲವು ವೇಷಭೂಷಣಗಳಲ್ಲಿ ಮುದ್ದುಮುದ್ದಾಗಿ ಕಾಣುವ ಅನುಷ್ಕಾ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವಳೆಂಬುದು ನಾವೂ ಹೇಳಿಕೊಂಡು ಖುಷಿ ಪಡಬಹುದಾದ ವಿಚಾರ.