ಬಾಲಿವುಡ್ ನಟ 'ಲಗಾನ್' ಖ್ಯಾತಿಯ ರಾಜೇಶ್ ವಿವೇಕ್ ವಿಧಿವಶ ಬಾಲಿವುಡ್ ಸೂಪರ್ ಹಿಟ್ ಚಿತ್ರ ಲಗಾನ್‌ ಚಿತ್ರದಲ್ಲಿ ಗುರಾನ್ ಪಾತ್ರಧಾರಿ ರಾಜೇಶ್ ವಿವೇಕ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ... ಮುಂಬೈ: ಬಾಲಿವುಡ್ ಸೂಪರ್ ಹಿಟ್ ಚಿತ್ರ ಲಗಾನ್‌ ಚಿತ್ರದಲ್ಲಿ ಗುರಾನ್ ಪಾತ್ರಧಾರಿ ರಾಜೇಶ್ ವಿವೇಕ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೈದರಾಬಾದ್ ನಲ್ಲಿ 66 ವರ್ಷದ ರಾಜೇಶ್ ವಿವೇಕ್ ಶೂಟಿಂಗ್‌ ವೇಳೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಉತ್ತರಪ್ರದೇಶ ಜೈನಪುರಿ ಹಾಗೂ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗಭೂಮಿ ಕಲಾವಿದರಾಗಿ ಅವರು ಅಧ್ಯಯನ ಮಾಡಿದ್ದರು. ಶಾರುಖ್ ಖಾನ್ ಅಭಿನಯದ ಸ್ವದೇಶ್‌, ಬೈಂಡಿಟ್‌ ಕ್ವೀನ್‌ ಸೇರಿದಂತೆ ಅನೇಕ ಹಿಂದಿ ಚಿತ್ರಗಳಲ್ಲಿ ನಟನೆ ಮಾಡಿ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದರು. ದಕ್ಷಿಣ ಭಾರತದ ಚಲನಚಿತ್ರಕ್ಕೆ ಸಂಬಂಧಿಸಿದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವೇಳೆ ಅವರು ಸಾವನ್ನಪ್ಪಿರುವುದಾಗಿ ಅವರ ಸಹೋದರ ವಿವೇಕ್‌ ಶರ್ಮಾ ಮಾಹಿತಿ ನೀಡಿದ್ದಾರೆ. ರಾಜೇಶ್‌ ವಿವೇಕ್‌ 1978ರಲ್ಲಿ ಶ್ಯಾಮ್ ಬೆನಗಲ್ ರವರ "ಜೂನೂನ್" ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ನಂತರ ಟಿವಿಯಲ್ಲಿ ಮೂಡಿಬರುತ್ತಿದ್ದ ಮಹಾಭಾರತದಲ್ಲೂ ಅವರು ನಟನೆ ಮಾಡಿದ್ದರು. ಅಗ್ನಿಪಥ್, ರಾಮ್ ತೇರಿ ಗಂಗಾ ಮೈಲಿ ಸೇರಿದಂತೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟನೆ ಮಾಡಿ ಗಮನ ಸೆಳೆದಿದ್ದರು.