ಡೂಡಲ್ ಮೂಲಕ ಬಾಲಿವುಡ್ ನಟಿ ನೂತನ್ ಜನ್ಮದಿನ ನೆನಪಿಸಿದ ಗೂಗಲ್! ಖ್ಯಾತ ಸರ್ಚ್ ಎಂಜಿನ್ ಗೂಗಲ್ ಬಾಲಿವುಡ್ ನಟಿ ನೂತನ್ ಅವರ 81ನೇ ಜನ್ಮ ದಿನವನ್ನು ನೆನಪಿಸುವ ವಿಶೇಷ ಡೂಡಲ್ ಬಿಡಿಸಿದೆ. ನವದೆಹಲಿ: ಖ್ಯಾತ ಸರ್ಚ್ ಎಂಜಿನ್ ಗೂಗಲ್ ಬಾಲಿವುಡ್ ನಟಿ ನೂತನ್ ಅವರ 81ನೇ ಜನ್ಮ ದಿನವನ್ನು ನೆನಪಿಸುವ ವಿಶೇಷ ಡೂಡಲ್ ಬಿಡಿಸಿದೆ. ಜೂನ್ 4 ನಟಿ ನೂತನ್ ಸಮರ್ಥ್ ಬಾಹಿ ಅವರ ಜನ್ಮವಾಗಿದ್ದು, ಅವರ 81ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಗೂಗಲ್ ಡೂಡಲ್ ಬಿಡಿಸಿದೆ. ನೂತನ್ ಅವರ ವಿವಿಧ ವ್ಯಂಗ್ಯಚಿತ್ರಗಳನ್ನು ಡೂಡಲ್ ನಲ್ಲಿ ಬಿಡಿಸಲಾಗಿದ್ದು, ನಟಿಯ ಸಂತೋಷಮಯ, ದುಃಖಕರ ಹಾಗೂ ವಿಷಾಧನೀಯ ಭಾವನೆಗಳನ್ನು ಬಿಂಬಿಸುವ ವ್ಯಂಗ್ಯಚಿತ್ರಗಳನ್ನು ಬಿಡಿಸಲಾಗಿದೆ. ಸುಮಾರು 40 ವರ್ಷಗಳ ಕಾಲ ಸಿನಿಮಾ ವೃತ್ತಿಯಲ್ಲಿದ್ದ ನೂತನ್ ಅವರು ಸುಮಾರು 70 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಬಾಲಿವುಡ್ ನಲ್ಲಿ 5 ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಏಕೈಕ ನಟಿ ಎಂಬ ಖ್ಯಾತಿಗೂ ನೂತನ್ ಪಾತ್ರರಾಗಿದ್ದರು. ಆದರೆ 2011ರಲ್ಲಿ ಅವರದೇ ಸಂಬಂಧಿ ತನುಜಾ ಮುಖರ್ಜಿ ಅವರ ಪುತ್ರಿ ಕಾಜೋಲ್ ಈ ದಾಖಲೆಯನ್ನು ಮುರಿದಿದ್ದರು.