ಗುಳಿಕೆನ್ನೆ ಸುಂದರಿಗೆ ಹುಟ್ಟುಹಬ್ಬ ಸಂಭ್ರಮ ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಹೆಸರು... ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡುತ್ತಿರುವ ಗುಳಿಕೆನ್ನೆ ಸುಂದರಿ ದೀಪಿಕಾ ಪಡುಕೋಣೆಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿರುವ ದೀಪಿಕಾ ಇಂದು 29ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆ ಈಗ ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದು, ಚೆನ್ನೈ ಎಕ್ಸ್‌ಪ್ರೆಸ್, ರಾಮ್‌ಲೀಲಾ, ಯೇ ಜವಾನಿ ಹೇ ದಿವಾನಿ, ಫೈಂಡಿಂಗ್ ಫ್ಯಾನಿ, ಹ್ಯಾಪಿ ನ್ಯೂ ಇಯರ್ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಭಾರತದ ಸೂಪರ್ ಮಾಡೆಲ್ ಆಗಿದ್ದ ದೀಪಿಕಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಈಗ ಬಾಲಿವುಡ್‌ನ ಹಾಲಿ ಮಾಹಾರಾಣಿಯಾಗಿದ್ದಾರೆಂದರೆ ತಪ್ಪಾಗಲಾರದು. ಬಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಮುದ್ದಿನ ಮಗಳಾದ ದೀಪಿಕಾ ಬಣ್ಣದ ಲೋಕಕ್ಕೆ ಕಾಲಿರಿಸಿದ್ದು ಉಪೇಂದ್ರ ಜೋಡಿಯಾಗಿ ಐಶ್ವರ್ಯ ಚಿತ್ರದ ಮೂಲಕ. ನಂತರ ಬಾಲಿವುಡ್‌ನಲ್ಲಿ ಕಿಂಗ್ ಖಾನ್ ಶಾರೂಕ್‌ರೊಂದಿಗೆ ಓಂ ಶಾಂತಿ ಓಂ ಚಿತ್ರದ ಮೂಲಕ ಭರ್ಜರಿ ಮಿಂಚಿ, ಈಗ ಬಾಲಿವುಡ್‌ನಲ್ಲಿ ಬಹುಬೇಡಿಕೆ ನಟಿಯಾಗಿಬಿಟ್ಟಿದ್ದಾರೆ.