ಅಸ್ವಸ್ಥ ತಾಯಿಯ ಆಸ್ಪತ್ರೆಯಲ್ಲೇ ಬಿಟ್ಟು ಹೋದ ಮಗ; ಅಸ್ಪತ್ರೆಯಲ್ಲಿ ಆನಾಥೆಯಾದ "ಪಾಕೀಜಾ" ನಟಿ! ಪಾಕೀಜಾ, ರಜಿಯಾ ಸುಲ್ತಾನದಂತಹ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದ ಬಾಲಿವುಡ್ ನ ಖ್ಯಾತ ನಟಿ ಗೀತಾ ಕಪೂರ್ ಇದೀಗ ಅಕ್ಷರಶಃ ಅನಾಥೆಯಾಗಿದ್ದಾರೆ. ಮುಂಬೈ: ಪಾಕೀಜಾ, ರಜಿಯಾ ಸುಲ್ತಾನದಂತಹ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದ ಬಾಲಿವುಡ್ ನ ಖ್ಯಾತ ನಟಿ ಗೀತಾ ಕಪೂರ್ ಇದೀಗ ಅಕ್ಷರಶಃ ಅನಾಥೆಯಾಗಿದ್ದಾರೆ. ಗೀತಾ ಕಪೂರ್ ಅವರ ಸ್ವಂತ ಮಕ್ಕಳೇ ಅವರನ್ನು ತೊರೆದಿದ್ದ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಹಿರಿಯ ಜೀವಕ್ಕೆ ಇದೀಗ ಆಸರೆ ಇಲ್ಲದಂತಾಗಿದೆ. ಮೂಲಗಳ ಪ್ರಕಾರ ಕಳೆದ ಏಪ್ರಿಲ್ 21ರಂದು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದಾಗಿ ನಟಿ ಗೀತಾ ಕಪೂರ್ ಅವರನ್ನು ಅವರ ಪುತ್ರ ರಾಜಾ ಮುಂಬೈನ ಎಸ್ ಆರ್ ವಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆಸ್ಪತ್ರೆ ಸಿಬ್ಬಂದಿ ದಾಖಲಾತಿಗೆ ಠೇವಣಿ ಇಡುವಂತೆ ರಾಜಾ ಅವರನ್ನು ಕೇಳಿದ್ದು, ಎಟಿಎಂ ನಿಂದ ಹಣ ತರುವುದಾಗಿ ತೆರಳಿದ ಗೀತಾ ಕಪೂರ್ ಅವರ ಮಗ ನಾಪತ್ತೆಯಾಗಿದ್ದಾರೆ. ಅವರನ್ನು ಸಂಪರ್ಕಿಸಲು ಆಸ್ಪತ್ರೆ ಸಿಬ್ಬಂದಿ ಸಾಕಷ್ಟು ಪ್ರಯತ್ನಿಸಿದ್ದಾರೆಯಾದರೂ ಪ್ರಯೋಜನವಾಗಿಲ್ಲ. ಅಂತಿಮವಾಗಿ ಗೀತಾ ಕಪೂರ್ ಅವರ ಮಗಳಾದ ಪೂಜಾ ಅವರನ್ನು ಸಂಪರ್ಕಿಸಿ ವಿಚಾರ ತಿಳಿಸಿದ್ದರೂ ಅವರೂ ಕೂಡ ಆಸ್ಪತ್ರೆಯತ್ತ ತಲೆ ಹಾಕಿಲ್ಲ. ಗೀತಾ ಅವರ ಕರುಣಾಜನಕ ಕಥೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಖ್ಯಾತ ನಿರ್ಮಾಪಕ ಹಾಗೂ ಸಿಬಿಎಫ್ ಸಿ ಸದಸ್ಯ ರಮೇಶ್ ಚೌರಾಣಿ ಅವರು ಗೀತಾ ಕಪೂರ್ ಅವರ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ನಟಿ ಗೀತಾ ಕಪೂರ್ ಅವರು, ತಮ್ಮ ಮಗ ರಾಜಾ ನಿತ್ಯ ದೈಹಿಕವಾಗಿ ಹಿಂಸಿಸುತ್ತಿದ್ದ. ತನ್ನನ್ನು ವೃದ್ಧಾಶ್ರಮಕ್ಕೆ ತೆರಳುವಂತೆ ನಿತ್ಯ ಹಿಂಸಿಸುತ್ತಿದ್ದ. ಆದರೆ ಇದಕ್ಕೆ ನಾನು ಒಪ್ಪಿರಲಿಲ್ಲ. ಹೀಗಾಗಿ ನನ್ನನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದ. ಅಲ್ಲದೆ ನಾಲ್ಕು ದಿನಕ್ಕೊಮೆ ಊಟ ನೀಡುತ್ತಿದ್ದ ಎಂದು ತಮ್ಮ ಕರುಣಾಜನಕ ಕಥೆಯನ್ನು ವಿವರಿಸಿದ್ದಾರೆ. ಇದೀಗ ಗೀತಾ ಕಪೂರ್ ಅವರ ಪುತ್ರ ರಾಜಾ ಮತ್ತು ಪುತ್ರಿ ಪೂಜಾ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಆಸ್ಪತ್ರೆ ಸಿಬ್ಬಂದಿ ದೂರು ದಾಖಲು ಮಾಡಿದ್ದು, ಪೊಲೀಸರು ರಾಜಾ ಅವರ ಆಪಾರ್ಟ್ ಮೆಂಟ್ ಗೆ ತೆರಳಿ ತನಿಖೆ ನಡೆಸಿದ್ದಾರೆ. ಈ ವೇಳೆ ರಾಜಾ ಆಪಾರ್ಟ್ ಮೆಂಟ್ ನಿಂದ ಪರಾರಿಯಾಗಿದ್ದು, ಅವರ ಮೊಬೈಲ್ ಅನ್ನು ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗತ್ತಿದೆ. ಒಟ್ಟಾರೆ ಒಂದು ಕಾಲದಲ್ಲಿ ಚಿತ್ರರಸಿಕರನ್ನು ರಂಜಿಸಿದ್ದ ಖ್ಯಾತ ನಟಿಗೆ ತಮ್ಮ ಮಕ್ಕಳಿಂದಲೇ ಇಂತಹ ಹೀನ ಸ್ಥಿತಿ ಬಂದಿರುವುದು ನಿಜಕ್ಕೂ ದುರದೃಷ್ಟಕರ.