ರಿಲೀಸ್ ಗೂ ಮೊದಲೇ ದಾಖಲೆ ಬರೆದ ಸಲ್ಮಾನ್ "ಟ್ಯೂಬ್ ಲೈಟ್" ನಟ ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಟ್ಯೂಬ್ ಲೈಟ್ ತೆರೆ ಕಾಣಲು ಇನ್ನೂ 3 ತಿಂಗಳು ಬಾಕಿ ಇದ್ದು, ಅದಾಗಲೇ ಈ ಚಿತ್ರ ಗಳಿಕೆಯಲ್ಲಿ ದಾಖಲೆ ಬರೆದಿದೆ. ಮುಂಬೈ: ನಟ ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಟ್ಯೂಬ್ ಲೈಟ್ ತೆರೆ ಕಾಣಲು ಇನ್ನೂ 3 ತಿಂಗಳು ಬಾಕಿ ಇದ್ದು, ಅದಾಗಲೇ ಈ ಚಿತ್ರ ಗಳಿಕೆಯಲ್ಲಿ ದಾಖಲೆ ಬರೆದಿದೆ. ಕಭೀರ್ ಖಾನ್ ನಿರ್ದೇಶನದ ಭಜರಂಗಿ ಭಾಯಿಜಾನ್ ಚಿತ್ರದ ಯಶಸ್ಸಿನ ಗುಂಗಿನಲ್ಲೇ ಟ್ಯೂಬ್ ಲೈಟ್ ಚಿತ್ರದಲ್ಲಿ ಒಂದಾಗಿರುವ ಸಲ್ಮನ್-ಕಭೀರ್ ಖಾನ್ ಜೋಡಿ ಮತ್ತೊಂದು ಇತಿಹಾಸ ನಿರ್ಮಿಸುವತ್ತ ದಾಪುಗಾಲಿರಿಸಿದೆ. ಬಹು ನಿರೀಕ್ಷಿತ ಟ್ಯೂಬ್ ಲೈಟ್ ಚಿತ್ರದ ವಿತರಣಾ ಹಕ್ಕು ದಾಖಲೆ ಬೆಲೆಗೆ ಮಾರಾಟವಾಗಿದ್ದು, ಬರೊಬ್ಬರಿ 132 ಕೋಟಿ ರುಗೆ ವಿತರಣಾ ಹಕ್ಕು ಮಾರಾಟವಾಗಿದೆ. ಆ ಮೂಲಕ ಟ್ಯೂಬ್ ಲೈಟ್ ಚಿತ್ರ ಶಾರುಖ್ ಖಾನ್ ಅಭಿನಯದ ದಿಲ್ವಾಲೆ ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ. ಸೆಂಟ್ರಲ್ ಇಂಡಿಯಾ ಹೊರತು ಪಡಿಸಿ ಆಲ್ ಇಂಡಿಯಾ ವಿತರಣಾ ಹಕ್ಕನ್ನು ಹಕ್ಕುನ್ನು ಮಾರಾಟ ಮಾಡಲಾಗಿದ್ದು, ಸೆಂಟ್ರಲ್ ಇಂಡಿಯಾದ ವಿತರಣಾ ಹಕ್ಕನ್ನು ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಸಲೀಂ ಖಾನ್ ಅವರ ಸ್ನೇಹಿತ ಆದಿತ್ಯಾ ಚೌಕ್ಸಿ ಅವರೊಂದಿಗೆ ಸಲೀಂ ಖಾನ್ ಅವರು ಈ ಚಿತ್ರವನ್ನು ತೆರೆಗೆ ತರಲಿದ್ದು, ಬಂದ ಲಾಭಾಂಶದಲ್ಲಿ ಇಬ್ಬರೂ ಪಾಲು ಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಬಾಕ್ಸ್ ಆಫೀಸ್ ತಜ್ಞರು ಅಭಿಪ್ರಾಯಪಡುವಂತೆ ಟ್ಯೂಬ್ ಲೈಟ್ ಚಿತ್ರ ತೆರೆಕಾಣುವ ಹೊತ್ತಿಗೆ ವಿತರಣೆಯಿಂದಲೇ ಸುಮಾರು 250 ಕೋಟಿಗೂ ಹೆಚ್ಚು ಹಣ ಗಳಿಸಲಿದೆ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ವಿದೇಶಗಳಲ್ಲಿ ಚಿತ್ರವನ್ನು ತೆರೆಗೆ ತರಲು ಹಲವು ಪ್ರಮುಖ ವಿದೇಶಿ ವಿತರಣಾ ಸಂಸ್ಥೆಗಳು ಮುಂದೆ ಬಂದಿದ್ದು, ಇದರಿಂದ ಬರುವ ಮೊತ್ತ ಕೂಡ ದಾಖಲೆ ಪ್ರಮಾಣದಲ್ಲಿರಲಿದೆ ಎಂದು ಅಂದಾಜು ಹಾಕಲಾಗತ್ತಿದೆ. ಇದಲ್ಲದೆ ಚಿತ್ರ ತೆರೆಕಂಡ ಬಳಿಕ 300 ಕೋಟಿ ಕ್ಲಬ್ ಸೇರುವಲ್ಲಿ ಅಚ್ಚರಿ ಏನಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟ್ಯೂಬ್ ಲೈಟ್ ಕಭೀರ್ ಖಾನ್ ಮತ್ತು ಸಲ್ಮಾನ್ ಖಾನ್ ಜೋಡಿಯ ಮೂರನೇ ಚಿತ್ರವಾಗಿದ್ದು, ಈ ಹಿಂದೆ ಏಕ್ ಥಾ ಟೈಗರ್ ಮತ್ತು ಭಜರಂಗಿ ಭಾಯ್ ಜಾನ್ ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ಕೆಲಸ ಮಾಡಿತ್ತು.